ಜನತಾ ಕರ್ಫ್ಯೂ ನಾಮ್ ಕೆ ವಾಸ್ತೆ

hn-8-1(A)
Published on

ವಿಜಯಪುರ: ಕರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ನಾಮ್ ಕೆ ವಾಸ್ತೆಯಂತಾಗಿದೆ. ಜಿಲ್ಲೆಯಲ್ಲಿ ವಾಹನ ಸವಾರರ ಓಡಾಟ ಒಂದಾದರೆ, ಇನ್ನೊಂದೆಡೆ ಪಡಿತರ ಅಂಗಡಿ, ಕಾಯಿಪಲ್ಲೆ ಮಾರಾಟ ಮಾಡುವ ಸ್ಥಳದಲ್ಲಿ ಕರೊನಾ ನಿಯಮ ಉಲ್ಲಂಘನೆಯಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಜನರು ಗಾಳಿಗೆ ತೂರಿದ್ದಾರೆ.

ತರಕಾರಿ ಖರೀದಿಗೆ ಮುಗಿಬಿದ್ದ ಜನ
ಜಿಲ್ಲೆಯಲ್ಲಿ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆವರೆಗೆ ತರಕಾರಿ, ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ತರಕಾರಿ ಖರೀದಿಗೆ ಜನರು ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂದವು.

ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ಶನಿವಾರ ತರಕಾರಿ ಮಾರಾಟ ಮಾಡಲು ವ್ಯಾಪಾರಿಗಳು ಬರುತ್ತಿದ್ದಂತೆ ಮಹಿಳೆಯರು ಸುತ್ತುವರಿದು ಖರೀದಿ ಮಾಡಿದರು. ಖರೀದಿ ವೇಳೆಯಲ್ಲಿ ಪರಸ್ಪರ ಅಂತರ ಮಾಯವಾಗಿತ್ತು. ಸರ್ಕಾರದ ನೀತಿ, ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ರೇಷನ್‌ಗಾಗಿ ಸರತಿ
ವಿಜಯಪುರ ತಾಲೂಕಿನ ಕಗ್ಗೋಡದಲ್ಲಿ ಪಡಿತರಕ್ಕಾಗಿ ಜನರು ಸರತಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿತ್ತು. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಾಹನ ಸವಾರರನ್ನು ಕೇಳೋರಿಲ್ಲದಂತಾಗಿದೆ. ಬೆಳಗ್ಗೆಯಿಂದ ರಾತ್ರಿವರೆಗೂ ವಾಹನದಲ್ಲಿ ಓಡಾಡುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕರು ಕರೊನಾ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಬಳಕೆ, ಪರಸ್ಪರ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net