ಎಸ್‌ಯುಸಿಐ (ಸಿ)ಯಿಂದ ಆನ್‌ಲೈನ್ ಪ್ರತಿಭಟನೆ

vjp-18-1
Published on

ವಿಜಯಪುರ: ಕರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸಕಾಲಕ್ಕೆ ವೈದ್ಯಕೀಯ ಸೇವೆ ಲಭ್ಯವಾಗದೆ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರ ಜನರಿಗೆ ವೈದ್ಯಕೀಯ ನೆರವು ನೀಡಬೇಕೆಂದು ಆಗ್ರಹಿಸಿ ಎಸ್‌ಯುಸಿಐ (ಸಿ) ಪದಾಧಿಕಾರಿಗಳು ಮಂಗಳವಾರ ಆನ್‌ಲೈನ್ ಪ್ರತಿಭಟನೆ ನಡೆಸಿದರು.

ಕರೊನಾ ಎರಡನೇ ಅಲೆ ಜೋರಾಗಿದೆ. ಮೊದಲ ಅಲೆ ಇದ್ದಾಗಲೇ ಸರ್ಕಾರ ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕಿತ್ತು. ಆದರೂ ಸರ್ಕಾರ ಬೇಜವಾಬ್ದಾರಿತನ ಪ್ರದರ್ಶಿಸಿತು. ನಿರ್ಲಕ್ಷೃ ವಹಿಸಿದ್ದರಿಂದಾಗಿ ಇಂದು ಸೋಂಕು ವ್ಯಾಪಕವಾಗಿ ಹರಡಿತು. ಸಾವಿನ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಆಪಾದಿಸಿದರು.

ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಜನ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಕರೊನಾ ಹಾವಳಿಯಿಂದ ಜನ ಭಯಭೀತರಾಗಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಗ್ರಾಮೀಣರ ಆರೋಗ್ಯ ತಪಾಸಣೆಗೆ ಮುಂದಾಗಬೇಕು. ಅಗತ್ಯ ಸೌಕರ್ಯ ಕಲ್ಪಿಸಬೇಕು. ರೈತರು, ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ, ಸದಸ್ಯರಾದ ಮಲ್ಲಿಕಾರ್ಜುನ, ಬಾಳು ಜೇವೂರ, ಸಿದ್ಧಲಿಂಗ ಬಾಗೇವಾಡಿ, ಭರತಕುಮಾರ, ಶರತ್, ಶ್ರೀಕಾಂತ, ಶಿವಬಾಳಮ್ಮ, ಕಮಲಾ ತೇಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net