ಕಾಂಗ್ರೆಸ್‌ನಿಂದ ಅತ್ಯುತ್ತಮ ಜನ ಸೇವೆ..!

vjp-7-1
Published on

ವಿಜಯಪುರ: ಕರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಪ್ರತಿಪಕ್ಷದಲ್ಲಿದ್ದರೂ ಆಡಳಿತ ಪಕ್ಷದಂತೆ ಕಾರ್ಯನಿರ್ವಹಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸುಮಾರು 600 ಕೋಟಿ ರೂ. ಹಣ ಖರ್ಚು ಮಾಡಿದ್ದಾರೆಂದು ರಾಜ್ಯ ಸಭಾ ಸದಸ್ಯ ಹಾಗೂ ಎಐಸಿಸಿ ವಕ್ತಾರ ಡಾ. ಸೈಯ್ಯದ್ ನಾಸೀರ್ ಹುಸೇನ್ ತಿಳಿಸಿದರು.

ಬಡವರಿಗೆ ಆಹಾರ ಮತ್ತು ವೈದ್ಯಕೀಯ ಕಿಟ್, ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಆಂಬುಲೆನ್ಸ್ ಸೇವೆ, ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹೀಗೆ ಅನೇಕ ಸೇವೆಗಳನ್ನು ನೀಡಲಾಗಿದೆ. 1200ಕ್ಕೂ ಅಧಿಕ ಆಂಬುಲೆನ್ಸ್‌ಗಳನ್ನು ಜನ ಸೇವೆಗೆ ಲೋಕಾರ್ಪಣೆ ಮಾಡಿದೆ. ಈ ಎಲ್ಲ ಕಾರಣಗಳಿಂದಾಗಿ ಕಾಂಗ್ರೆಸ್ ಕರೊನಾ ನಿಯಂತ್ರಿಸುವಲ್ಲಿ ಆಡಳಿತ ಪಕ್ಷಕ್ಕೂ ಮಿಗಿಲಾಗಿ ಕೆಲಸ ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕರೊನಾ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜನರಿಗೆ ಸಣ್ಣ ಸ್ಪಂದನೆಯೂ ದೊರಕಿರಲಿಲ್ಲ. ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೆ ಅನೇಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಗ್ರಾಮೀಣರು ಆಹಾರ ಮತ್ತು ವೈದ್ಯಕೀಯ ಸೇವೆಗಾಗಿ ಪರಿತಪಿಸಬೇಕಾಯಿತು. ಇಂಥ ಸಂದರ್ಭ ಕಾಂಗ್ರೆಸ್ ಜನರ ನೆರವಿಗೆ ಧಾವಿಸಿತು. ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರೆಂದು ಹೆಮ್ಮೆಯಿಂದ ನುಡಿದರು.

ಗಾಯದ ಮೇಲೆ ಬರೆ
ಒಂದೆಡೆ ಜನ ಕರೊನಾದಿಂದ ತತ್ತರಿಸುತ್ತಿದ್ದರೆ ಇನ್ನೊಂದೆಡೆ ಸರ್ಕಾರ ಬೆಲೆ ಏರಿಕೆ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ನಮ್ಮ ಸರ್ಕಾರದ ಆಡಳಿತ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಪೈಸೆ ಲೆಕ್ಕದಲ್ಲಿ ಏರಿಕೆಯಾದರೂ ಪ್ರಬಲ ಪ್ರತಿಭಟನೆ, ಜನಾಂದೋಲನ ರೂಪಿಸುತ್ತಿದ್ದ ಬಿಜೆಪಿ ನಾಯಕರು ಇದೀಗ ಪೆಟ್ರೋಲ್ ಶತಕ ಬಾರಿಸಿದ ಸಂದರ್ಭದಲ್ಲಿ ಏಕೆ ಮೌನವಾಗಿದ್ದೀರಿ? ಈ ಕುರಿತು ಸಂಸತ್‌ನಲ್ಲಿ ಪ್ರಶ್ನೆ ಕೇಳಿದರೂ ಉತ್ತರ ಕೊಡುತ್ತಿಲ್ಲ ಎಂದರು.

ಕಚ್ಚಾ ತೈಲ ಬೆಲೆ ಸಂಪೂರ್ಣವಾಗಿ ಕುಸಿದಿದ್ದರೂ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ ಜನಸಾಮಾನ್ಯರಿಗೆ ಹೊರೆಯಾಗದಿರಲಿ ಎಂದು ಸಬ್ಸಿಡಿ ನೀಡಿ ಪೆಟ್ರೋಲ್ ದರ ನಿಯಂತ್ರಣ ಮಾಡಿತ್ತು ಎಂದರು.

ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ನಮಗಿಂತ ಪ್ರತಿ ಲೀಟರ್‌ಗೆ 20 ರಿಂದ 30 ರೂ. ಕಡಿಮೆ ಇದೆ. ನಮ್ಮ ದೇಶದಲ್ಲಿಯೇ ಈ ಹೆಚ್ಚುವರಿ ಭಾರವೇಕೆ? ಅದೂ ಕರೊನಾ ಕಾಲಘಟ್ಟದಲ್ಲಿ ಈ ರೀತಿ ಹೊರೆ ಏಕೆ? ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಠಲ ಕಟಕಧೋಂಡ, ಶರಣಪ್ಪ ಸುಣಗಾರ, ಸುರೇಶ ಘೋಣಸಗಿ, ಅಬ್ದುಲ್ ಹಮೀದ್ ಮುಶ್ರೀಫ್, ಮೊಹ್ಮದ್ ರಫೀಕ್ ಟಪಾಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net