ಬಿಜೆಪಿಯಿಂದ ಶಾಂತಿ ಕದಡುವ ಯತ್ನ

vjp-3-1
Published on


ವಿಜಯಪುರ: ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯಿಸಿದರು.ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮೊಹಮ್ಮದ್ ರಫೀಕ ಟಪಾಲ್ ಮಾತನಾಡಿ, ಬಿಜೆಪಿ ಸರ್ಕಾರದಿಂದ ಸತತವಾಗಿ ಅಲ್ಪಸಂಖ್ಯಾತರ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿರುವ ವಿಎಚ್‌ಪಿ ಮತ್ತು ಇತರ ಹಿಂದು ಸಂಘಟನೆಗಳಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ. ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕ್ರಿಸ್‌ಮಸ್ ಆಚರಣೆ ವೇಳೆ ಬಜರಂಗ ದಳದ ಕಾರ್ಯಕರ್ತರು ಕ್ರೈಸ್ತರ ಪ್ರಾರ್ಥನಾ ಮಂದಿರದಲ್ಲಿ ದಾಂಧಲೆ ನಡೆಸಿದ್ದಾರೆ. ಇಂಥ ಗೂಂಡಾಗಳನ್ನು ಪೊಲೀಸರು ಏಕೆ ಬಂಧಿಸುತ್ತಿಲ್ಲ. ಸರ್ಕಾರದ ಕಣ್ಣಿಗೆ ಇದೆಲ್ಲ ಕಾಣಿಸುತ್ತಿಲ್ಲವೆ? ಎಂದು ಪ್ರಶ್ನಿಸಿದರು.

ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಭಾರತ ಭಾವೈಕ್ಯತೆಯ ದೇಶ. ಇಂಥ ನಾಡಿನಲ್ಲಿ ಬಿಜೆಪಿ ಶಾಂತಿ ಕದಡುವ ಯತ್ನ ನಡೆಸಿದೆ. ಇದರಿಂದ ದೇಶದ ಘನತೆ ಮತ್ತು ಗೌರವ ಮಣ್ಣು ಪಾಲಾಗುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಬಡೇಪೀರ ಜುನೇದಿ, ಅಬ್ದುಲ್‌ಹಮೀದ್ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಚಾಂದಸಾಬ ಗಡಗಲಾವ, ಸುರೇಶಗೌಡ ಪಾಟೀಲ ಧೂಳಖೇಡ, ಜಮೀರಅಹ್ಮದ್ ಬಕ್ಷಿ, ಶಹಾಜಾ ಮುಲ್ಲಾ, ಉಸ್ಮಾನ್ ಪಟೇಲ್, ವಸಂತ ಹೊನಮೊಡೆ, ಅಬ್ದುಲ್‌ಖಾದಿರ್ ಖಾದಿಮ್, ಶಬ್ಬೀರ ಜಾಗೀರದಾರ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಮಂಜುಳಾ ಗಾಯಕವಾಡ, ಲಕ್ಷ್ಮ ಕ್ಷೀರಸಾಗರ, ರಜಾಕಸಾಬ ಕಾಖಂಡಕಿ, ಜಮೀರ್ ಬಾಂಗಿ, ಜಾಕೀರ್ ಬಾಗವಾನ, ಫಯಾಜ ಕಲಾದಗಿ, ಸಾಹೇಬಗೌಡ ಬಿರಾದಾರ, ಆಬೀದ ಸಂಗಮ, ಶರಣಪ್ಪ ಯಕ್ಕುಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net