

ವಿಜಯಪುರ: ಕರೊನಾ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಸಜ್ಜಾಗಿದ್ದು, ಆರೋಗ್ಯ ಹಸ್ತ ಯೋಜನೆಯಡಿ ಪ್ರತಿ ವಿಧಾನಸಭೆ ಕ್ಷೇತ್ರವಾರು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಖೀರ ಸನದಿ ತಿಳಿಸಿದರು.
ಕರೊನಾ ನಿಯಂತ್ರಣ ಹಾಗೂ ಜಾಗೃತಿಗೆ ಕಾಂಗ್ರೆಸ್ ಈಗಾಗಲೇ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಕರೊನಾ ವಾರಿಯರ್ಸ್ ಮಾದರಿಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಇಂದಿನಿಂದಲೇ ಜಿಲ್ಲಾ ಕೇಂದ್ರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 350 ಕ್ಕೂ ಹೆಚ್ಚು ಸ್ವಯಂ ಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ತಜ್ಞ ವೈದ್ಯರಿಂದ ಮಾರ್ಗದರ್ಶನ ಪಡೆದ ಕಾರ್ಯಕರ್ತರಿಗೆ ವಿಶೇಷ ಕಿಟ್ ನೀಡಲಾಗುತ್ತಿದೆ. ಆ ಕಿಟ್‌ನಲ್ಲಿ ಆಕ್ಸಿಮೀಟರ್, ಥರ್ಮಲ್ ಸ್ಕಾೃನ್ ಮಷಿನ್, ಮಾಸ್ಕ್, ಸ್ಯಾನಿಟೈಸರ್, ಫೇಸ್‌ಶೀಲ್ಡ್ ಮಾಸ್ಕ್ ಒದಗಿಸಲಾಗುತ್ತಿದೆ. ಈ ಪರಿಕರ ನೆರವು ಪಡೆದು ಮನೆ-ಮನೆಗೆ ತೆರಳಿ ರೋಗಿಗಳಿಗೆ ಧೈರ್ಯ ತುಂಬುವ ಹಾಗೂ ಆಸ್ಪತ್ರೆಗಳಿಗೆ ಸಂಪರ್ಕಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಕೈಗೊಳ್ಳಲಿದೆ ಎಂದರು.
ಅದೇ ತೆರನಾಗಿ ಕಾಂಗ್ರೆಸ್ ಕಾರ್ಯಕರ್ತರ ಆರೋಗ್ಯಕ್ಕೂ ವಿಶೇಷ ಒತ್ತು ನೀಡಿದ್ದು, ತಂಡದ ಇಬ್ಬರು ಸದಸ್ಯರಿಗೆ ವಿಮೆ ಸೌಲಭ್ಯವನ್ನು ಪಕ್ಷದ ವತಿಯಿಂದಲೇ ಕಲ್ಪಿಸಲಾಗುತ್ತಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 40 ತಂಡಗಳಿಗೆ ತಜ್ಞ ವೈದ್ಯರಿಂದ ವಿಶೇಷ ತರಬೇತಿ, ವೈದ್ಯರ ಮಾರ್ಗದರ್ಶನ ದೊರಕಿಸಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಕರೊನಾ ಕಾಲಘಟ್ಟದ ಸಂಕಷ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಪಕ್ಷದ ನೈತಿಕ ಜವಾಬ್ದಾರಿ, ಈ ಜವಾಬ್ದಾರಿಯನ್ನು ಪಕ್ಷ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು.
ಮುಖಂಡ ಅಬ್ದುಲ್‌ಹಮೀದ್ ಮುಶ್ರ್ೀ ಮಾತನಾಡಿ, ಕರೊನಾ ರೋಗಿಗಳಿಗೆ ಧೈರ್ಯವೇ ಪ್ರಮುಖ ಮದ್ದು. ನಮ್ಮ ಕಾರ್ಯಕರ್ತರ ಪಡೆ ಮೊದಲು ರೋಗಿಗಳಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲಿದೆ. ಹಲವಾರು ವೈದ್ಯರು ನಿತ್ಯ ಮಾರ್ಗದರ್ಶನ ನೀಡುತ್ತಿದ್ದು, ಕಾರ್ಯಕರ್ತರು ಈ ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವಿವರಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಚಾಂದಸಾಬ ಗಡಗಲಾವ, ಜಮೀರ್ ಅಹ್ಮದ್ ಭಕ್ಷಿ, ಆರತಿ ಶಹಾಪೂರ, ಮಲ್ಲನಗೌಡ ಬಿರಾದಾರ, ಅಬ್ದುಲ್ ಖಾದೀರ್ ಖಾದೀಮ್ ಮತ್ತಿತರರಿದ್ದರು.