ಆಹಾರ ಕ್ರಮ ಸರಳವಾಗಿರಲಿ

HN 22-4
Published on

ವಿಜಯಪುರ: ನಾವು ದಿನ ನಿತ್ಯ ಸೇವಿಸುವ ಆಹಾರ ಶುದ್ಧ ಹಾಗೂ ಪೌಷ್ಟಿಕವಾಗಿರಬೇಕು ಎಂದು ಕೃಷಿ ಇಲಾಖೆಯ ಆತ್ಮ ಉಪ ಯೋಜನಾ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗಾಗಿ ಶುಕ್ರವಾರ ನಡೆದ ‘ಸಿರಿ ಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ’ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಸಜ್ಜೆ, ಸಿರಿಧಾನ್ಯಗಳು ಮುಂತಾದವುಗಳ ಉತ್ಪನ್ನಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿದ್ದು, ಅವುಗಳನ್ನು ರಾಸಾಯನಿಕ ರಹಿತವಾಗಿ ಬೆಳೆದು ಸೇವಿಸಿದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಇಂದಿನ ದಿನಗಳಲ್ಲಿ ರಾಸಾಯನಿಕಗಳನ್ನು ಬಳಸಿ ಬೆಳೆದ ಬೆಳೆಗಳ ಉತ್ಪನ್ನಗಳನ್ನು ಸೇವಿಸುತ್ತಿರುವುದರಿಂದಾಗಿ ಆರೋಗ್ಯ ಹಾಗೂ ಪರಿಸರ ಸಂಬಂಧಿತ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಈ ಕುರಿತು ಮಹಿಳೆಯರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ವಿಶಾಲ ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥೆ ಸರೋಜಾ ಕವಲಾಪುರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರ ದುಡಿಮೆಯೇ ಹೆಚ್ಚಾಗಿದೆ. ಕುಟುಂಬದ ಯೋಗ ಕ್ಷೇಮ ನೋಡಿಕೊಳ್ಳುವುದರೊಂದಿಗೆ ಕೃಷಿ ಕಾರ್ಯಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಪೌಷ್ಟಿಕಾಂಶ ಭರಿತ ಸಮತೋಲನವಾದ ಆಹಾರವನ್ನು ತಾವು ಸೇವಿಸುವುದಲ್ಲದೆ ಕುಟುಂಬದ ಇತರ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ ಮಾತನಾಡಿದರು. ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥೆ ಡಾ.ಕಾಶಿಬಾಯಿ ಖ್ಯಾಡಗಿ, ಆತ್ಮಯೋಜನೆಯ ರಾಜ್ಯಮಟ್ಟದ ರೈತರ ಸಲಹಾ ಸಮಿತಿ ಸದಸ್ಯೆ ಸೀತಾ ದೊಡಮನಿ, ಸಮೃದ್ಧಿ ಸಂಸ್ಥೆಯ ಮಧು ಪಾಟೀಲ, ರಾಜಶ್ರೀ ಕೋರೆಗೋಳ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net