ರೈತರಿಗೆ ಇ-ಟ್ರೇಡಿಂಗ್ ಮಾಹಿತಿ

VMS 11-4
Published on

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹತ್ತರಕಿಹಾಳ, ಹತ್ತರಕಿಹಾಳ ತಾಂಡಾ, ಬಿಸನಾಳ, ದೇಗಿನಾಳ ರೈತರಿಗೆ ಈ-ಟ್ರೇಡಿಂಗ್ ಬಗ್ಗೆ ಮಾಹಿತಿ ಹಾಗೂ ಕೋವಿಡ್-19 ಕುರಿತು ಜಾಗೃತಿ ಮೂಡಿಸಲಾಯಿತು.
ರೈತರ ಬೆಳೆ ಮತ್ತು ಮಾರುಕಟ್ಟೆ ವ್ಯವಸ್ಥೆ, ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ಎಸ್.ಎಸ್.ಚವಾಣ್, ಡಾ.ಸಂಗೀತಾ ಜಾಧವ ಹಾಗೂ ಡಾ. ಬಸಮ್ಮ ಕಂಬಾರ ಅವರ ತಂಡ ಧಾರವಾಡ ಕೃಷಿ ವಿವಿ ವಿಜಯಪುರ ಜಿಲ್ಲಾ ಕೋವಿಡ್-19 ನೋಡಲ್ ಅಧಿಕಾರಿ ಹಾಗೂ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಅವರ ಮಾರ್ಗದರ್ಶನದಲ್ಲಿ ವಿವಿಧ ಗ್ರಾಮಗಳಿಗೆ ತೆರಳಿ ಮಾಹಿತಿ ನೀಡಿದರು.
ಆಯುಷ್ ಇಲಾಖೆ ಮಾರ್ಗಸೂಚಿಗಳ ಬಗ್ಗೆ ಪ್ರಚಾರ ಪಡಿಸಲಾಯಿತು. ನಿತ್ಯ ಹಣ್ಣು ಮತ್ತು ತರಕಾರಿ ಸೇವಿಸಬೇಕು. ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿಶಿಣ ಮತ್ತು ಶುಂಠಿ ಬಳಸುವ ಬಗ್ಗೆ ಸೂಚಿಸಲಾಯಿತು. ರೈತರು ತಮ್ಮ ಉತ್ಪನ್ನಗಳನ್ನು ನಗರ ಪ್ರದೇಶಗಳಿಗೆ ಮಾರಾಟ ಮಾಡಲು ಹೋಗುವಾಗ ಮುಂಜಾಗ್ರತೆ ಕ್ರಮಗಳಾದ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.
ಅಗ್ರಿವಾರ್ ರೂಂ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಯಿತು. ದೂರವಾಣಿ ಸಂಖ್ಯೆ: 18004251150 ಎಲ್ಲ ರೈತರಿಗೂ ನೀಡಲಾಯಿತು. ರೈತರು ಉತ್ಪನ್ನಗಳ ಮಾರುಕಟ್ಟೆ ಕುರಿತಾಗಿ ಹಾಗೂ ಕೈಗೊಂಡ ಕ್ರಮಗಳ ಕುರಿತಾಗಿ ಸ್ಥಳೀಯ ದಿನಪತ್ರಿಕೆಗಳ ಮೂಲಕ ಮಾಹಿತಿ ಹಾಗೂ ರೈತರಿಗೆ ಇ-ಟ್ರೇಡಿಂಗ್ ಬಗ್ಗೆ ಮಾಹಿತಿ ಪಡೆಯಲು ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net