ಸಕಾರಾತ್ಮಕ ಆಲೋಚನೆ ರೂಢಿಸಿಕೊಳ್ಳಿ

hn-22-5
Published on

ವಿಜಯಪುರ: ಸಂವಿಧಾನವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೊಂದು ಬಹುಮುಖ್ಯ ಗ್ರಂಥ. ಅದರ ರಕ್ಷಣೆ ಮಾಡಿದಾಗ ಮಾತ್ರ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಕನ್ನಡ ಅಧ್ಯಯನ ಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಡಾ ಬಿ.ಆರ್. ಅಂಬೇಡ್ಕರ್ ಪ್ರಚಾರ ಅಭಿಯಾನದಡಿ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಪ್ರಜೆಗಳಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಾನಮಾನ, ವ್ಯಕ್ತಿ ಗೌರವ, ಏಕತೆ ರೂಪಿಸುವುದೇ ಸಂವಿಧಾನ. ಅಂತಹ ಸಂವಿಧಾನವನ್ನು ನಾವು ತಿಳಿದು ಬದುಕಬೇಕು. ಪ್ರತಿಯೊಬ್ಬರಿಗೂ ಕಾನೂನಿನ ಪರಿಚಯ ಅತಿ ಅವಶ್ಯಕವಾದದ್ದು. ಸಕಾರಾತ್ಮಕ ಆಲೋಚನೆ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ವಿಶೇಷ ಶಕ್ತಿ ಇರುತ್ತದೆ. ಅದನ್ನು ಬಳಸಿಕೊಂಡಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಒಳ್ಳೆಯವರ ಸಂಘವನ್ನು ಮಾಡಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದರು.

ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಗತಿಯಲ್ಲಿ ಪಾಠ ಕಲಿಯುವುದಲ್ಲ, ಪುಸ್ತಕದ ಜ್ಞಾನವನ್ನು ಅರಿತುಕೊಳ್ಳಬೇಕು. ಸಂವಿಧಾನ ಬಹಳ ಮುಖ್ಯವಾದದ್ದು. ಅಂಬೇಡ್ಕರ್ ಅವರು ಸಂವಿಧಾನ ಎಂಬ ಮಹಾನ್ ಕೊಡುಗೆಯನ್ನು ನಮಗೆ ನೀಡಿದ ಹಿನ್ನೆಲೆ ನಮ್ಮ ಜೀವನ ಇಷ್ಟು ಸುಂದರವಾಗಿ ಮತ್ತು ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆದು ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.

ವಿವಿಯ ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಮಾತನಾಡಿದರು. ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ನಾಮದೇವಗೌಡ, ನೋಡಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಕಲಾವತಿ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net