

ವಿಜಯಪುರ: ಮಾನವ ಕುಲ ಬದುಕಲು ಆಮ್ಲಜನಕ ಅತಿ ಅವಶ್ಯ. ಆಮ್ಲಜನಕ ಉತ್ಪಾದಿಸಲು ವೃಕ್ಷಗಳು, ಗಿಡ ಮರಗಳನ್ನು ಬೆಳೆಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದರೆ ಇಂದು ಪರಿಸರ ಹಾನಿಯಾಗುತ್ತಿದ್ದು, ಮನುಕುಲವೇ ನಾಶದಂಚಿನಲ್ಲಿ ಸಾಗುತ್ತಿದೆ ಎಂದು ಲಯನ್ಸ್ ಕ್ಲಬ್ ಆ್ ಬಿಜಾಪುರ ಪರಿವಾರದ ಅಧ್ಯಕ್ಷ ಯಾಜ್ ಕಲಾದಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಚಿನ್ಮಯಿ ಸ್ಕೂಲ್ ಆವರಣದಲ್ಲಿ ಲಯನ್ಸ ಕ್ಲಬ್ ವತಿಯಿಂದ ಮಂಗಳವಾರ ಸಸಿ ನೆಡುವುದರ ಮೂಲಕ ವೃಕ್ಷಗಳ ಮಹತ್ವವನ್ನು ತಿಳಿಸಿದ ಅವರು, ಕರೊನಾ ಎಂಬ ಮಹಾಮಾರಿ ವಕ್ಕರಿಸಿ ಮಾನವನ ಶ್ವಾಸಕೋಶಕ್ಕೆ ಹಾನಿ ಮಾಡಿ ದೇಹಕ್ಕೆ ಆಮ್ಲಜನಕದ ಕೊರತೆ ಉಂಟು ಮಾಡುತ್ತಿದೆ. ಈ ಕೊರತೆಯನ್ನು ನಿವಾರಿಸಬೇಕಾದರೆ ಅತಿ ಹೆಚ್ಚು ಮರಗಿಡಗಳನ್ನು ನೆಟ್ಟು ಪರಿಸರ ರಕ್ಷಿಸಿ ಮನುಕುಲದ ಒಳಿತನ್ನು ಮಾಡಬೇಕೆಂದರು.
ಚಿನ್ಮಯಿ ಸ್ಕೂಲ್ ಚೇರ್ಮನ್ ಪ್ರತಿಭಾ ಪಾಟೀಲ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಸಸಿಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡಿ ಉತ್ತಮ ಪರಿಸರ ನಿರ್ಮಾಣಕ್ಕೆ ತಮ್ಮ ಅಳಿಲು ಸೇವೆ ಮಾಡಬೇಕು ಎಂದರು.
ಕ್ಲಬ್ ಕಾರ್ಯದರ್ಶಿ ರಾಜೇಶ ಗಾಯಕವಾಡ, ಖಜಾಂಚಿ ಜಯಶ್ರೀ ಲದ್ವಾ, ಶ್ರವಣಕುಮಾರ ಮಹಿಂದ್ರಕರ, ಸತ್ಯಕಾಮ ಕಟ್ಟಿ, ಪ್ರೊ.ಎಂ.ಬಿ.ರಜಪೂತ, ಎಚ್.ಎ. ಕಲಾದಗಿ, ಎಸ್.ಐ. ಗದ್ದಗಿಮಠ, ಸರೋಜಾ ಪಾಟೀಲ, ಬಸವರಾಜ ಕಾರಕೂರ ಇತರರು ಉಪಸ್ಥಿತರಿದ್ದರು.