ಪೂರ್ವ ಸಿದ್ಧತೆ ಕೈಗೊಳ್ಳಲು ಸೂಚನೆ

CC Patil 10 JAN 20
Published on

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ.16ರಂದು ವಿಜಯಪುರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಅಂದಾಜು 300 ಕೋಟಿ ರೂ. ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಯಡಿಯೂರಪ್ಪ ಅವರು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ಆದ್ದರಿಂದ ಅಂದು ನಡೆಯುವ ಕಾರ್ಯಕ್ರಮಕ್ಕೆ ಅವಶ್ಯಕ ಪೂರ್ವಸಿದ್ಧತೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಸೂಚಿಸಿದರು.

ವಿಜಯಪುರದಲ್ಲಿ ಮೀನುಗಾರಿಕೆ ಕಾಲೇಜು ಸ್ಥಾಪನೆ, ಮುಂದಿನ ಬಜೆಟ್‌ನಲ್ಲಿ ಜಿಲ್ಲೆಗೆ ಅನುದಾನ ಕಾಯ್ದಿರಿಸುವ ಕುರಿತು, ಪಡಿತರ ವ್ಯವಸ್ಥೆಗೆ ಬಿಳಿಜೋಳ ಅಳವಡಿಸುವ ಜತೆಗೆ 4 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ ದೊರಕಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಎಲ್ಲ ಸಿದ್ಧತೆ ಕೈಗೊಳ್ಳಬೇಕು. ಅಲ್ಲದೆ ಸೈಕ್ಲಿಂಗ್ ವೆಲೋಡ್ರೋಮ್ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ಗಳ ಅನುದಾನ ಕಾಯ್ದಿರಿಸುವ ಕುರಿತಂತೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕರಾದ ಎಂ.ಸಿ.ಮನಗೂಳಿ, ಸೋಮನಗೌಡ ವಿ ಪಾಟೀಲ(ಸಾಸನೂರ), ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net