

ವಿಜಯಪುರ: ಮಹಾಮಾರಿಗೆ ಗುಮ್ಮಟ ನಗರಿ ಸಂಪೂರ್ಣ ನಲುಗಿದ್ದು ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ !
ಗುರುವಾರ ಒಂದೇ ದಿನ ಏಳು ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಒಬ್ಬ ವ್ಯಕ್ತಿ ನಿಧನವಾಗಿದ್ದಾನೆ. 16 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿ 221 ಪ್ರಕರಣದ ಸಂಪರ್ಕದಲ್ಲಿರುವ 6 ಹಾಗೂ ಪಿ 228 ಪ್ರಕರಣದ ಸಂಪರ್ಕದಲ್ಲಿರುವವರಿಗೇ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಅಂದರೆ ಚಪ್ಪರಬಂದ್ ಕಾಲನಿಯ ಎರಡು ಕುಟುಂಬಗಳಲ್ಲೇ ಸೋಂಕು ಹೆಚ್ಚುತ್ತ ಸಾಗಿದೆ.
ಕೇವಲ 1.5 ವರ್ಷ ಪುಟ್ಟ ಕಂದನನ್ನೂ ಕರೊನಾ ಆವರಿಸಿದ್ದು ಕರುಳು ಚುರ್ ಎನಿಸುತ್ತಿದೆ. ಕರೊನಾ ಎಂದರೆ ಏನೆಂಬುದನ್ನು ಅರಿಯದ ಮುಗ್ದ ಕಂದನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಎಂಥವರಿಗಾದರೂ ಕಣ್ಣಾಲೆ ತೇವಗೊಳಿಸುವಂತಾಗಿದೆ. ಪ್ರಕರಣ ಪಿ 228ಗೆ ಸಂಬಂಧವಿರುವ 1.5 ವರ್ಷದ ಹೆಣ್ಣು ಮಗು ಈಗ ಕರೊನಾದ ಕಬಂಧಬಾಹುವಿನಲ್ಲಿದೆ. ಪ್ರಕರಣ 221ಗೆ ಸಂಬಂಧಿಸಿದಂತೆ 6 ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ 4 ಪುರುಷ ಹಾಗೂ ಇಬ್ಬರು ಮಹಿಳೆಯರಿದ್ದಾರೆ. 12 ವರ್ಷದ ಹೆಣ್ಣು ಮಗು ಸಹ ಕರೊನಾ ಪಾಸಿಟಿವ್‌ಗೆ ಒಳಗಾಗಿದೆ. ಪ್ರಕರಣ 221ಗೆ ಸಂಬಂಧಿಸಿದಂತೆ ಇಬ್ಬರು ಬೇರೊಂದು ಕುಟುಂಬ ಸದಸ್ಯರಿದ್ದು, ಇದೀಗ ಎರಡು ಕುಟುಂಬದಲ್ಲಿದ್ದ ಕರೊನಾ ಪಾಸಿಟಿವ್ ಈಗ ಮೂರನೇ ಕುಟುಂಬಕ್ಕೆ ವಿಸ್ತರಿಸಿದೆ.
ಮಹಾಮಾರಿ ಮಹಾರಾಷ್ಟ್ರದಿಂದಲೇ ಜಿಲ್ಲೆ ಪ್ರವೇಶಿಸಿರುವುದು ದೃಢಪಟ್ಟಿದೆ. ಪ್ರಕರಣ ಪಿ 221 ಗೆ ಸಂಬಂಧಿಸಿದಂತೆ ಸೋಂಕಿತರೆಲ್ಲರೂ ಮಹಾರಾಷ್ಟ್ರದ ಇಚಲಕರಂಜಿಗೆ ಹೋಗಿದ್ದು ಗೊತ್ತಾಗಿದೆ. ಅಲ್ಲಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಸಂದರ್ಭ ಈ ಸೋಂಕು ಹರಡಿದೆ. ಪಿ 228 ಪ್ರಕರಣ ಪುಣೆಯಿಂದ ಜಿಲ್ಲೆ ಪ್ರವೇಶ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ತಿಳಿಸುತ್ತಾರೆ. ಒಟ್ಟಿನಲ್ಲಿ ಎರಡೂ ಪ್ರಕರಣಗಳು ಮಹಾರಾಷ್ಟ್ರ ಸಂಪರ್ಕದಿಂದಲೇ ಬಂದವುಗಳಾಗಿದ್ದು ಈವರೆಗೂ ಎರಡನೇ ಹಂತದ ಸಂಪರ್ಕಕ್ಕೆ ವಿಸ್ತರಿಸಿಲ್ಲವೆಂದು ತಿಳಿಸುತ್ತಾರೆ.
ಈವರೆಗೆ 780 ಜನರ ಮೇಲೆ ನಿಗಾ ಇರಿಸಲಾಗಿದೆ. 72 ಜನ ಪರೀಕ್ಷಾ ಅವಧಿಯಲ್ಲಿದ್ದಾರೆ. 373 ಜನ ಗೃಹಬಂಧನದಲ್ಲಿದ್ದಾರೆ. 451 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ 262 ನೆಗೆಟಿವ್ ಬಂದಿದ್ದು, 17 ಪಾಸಿಟಿವ್ ಬಂದಿವೆ. ಇದರಲ್ಲಿ ಒಂದು ಸಾವನ್ನಪ್ಪಿದೆ. 184 ಪರೀಕ್ಷಾ ವರದಿ ಬರಬೇಕಿದೆ. ಸೋಂಕಿತರ ಆರೋಗ್ಯವನ್ನು ನುರಿತ ತಜ್ಞರಿಂದ ತಪಾಸಿಸಲಾಗುತ್ತಿದೆ.
ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ