ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆ ಪಾತ್ರ ಅನನ್ಯ

VJP 25-3
Published on

ವಿಜಯಪುರ: ದೇಶದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿ ಮತ್ತು ಸಮಾಜದ ವಿವಿಧ ರಂಗಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.

ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಹಾಗೂ ಮಹಿಳೆಯರ ಪ್ರಾಮುಖ್ಯತೆ’ ಕುರಿತ ವಿಚಾರ ಸಂಕೀರಣ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಮತ್ತು ಸಮಾಜ ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗಾಗಿ ಮುಂದಾಗಬೇಕು. ಮಹಿಳೆಯರು ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಸಮಾಜದ ವಿವಿಧ ರಂಗಗಳಲ್ಲಿ ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ. ಅವರಿಗೆ ಸರ್ಕಾರ ಮತ್ತು ಸಮಾಜದ ನೆರವು ಅಗತ್ಯವಾಗಿದೆ ಎಂದರು.

ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಸರನಾಡಗೌಡ ಮಾತನಾಡಿ, ಸರ್ಕಾರ ಕಾನೂನಾತ್ಮಕವಾಗಿ ಮಹಿಳೆಯರಿಗಾಗಿ ಹಲವಾರು ಕಾನೂನುಗಳು ಜಾರಿಗೆ ತಂದರು. ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರಿ ದೌರ್ಜನ್ಯ, ಲೈಂಗಿಕ ಕಿರುಕುಳ, ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ ಮುಂತಾದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳೆಯರಿಗೆ ಸುರಕ್ಷತೆ ಎಂಬುದು ಕನಸಿನ ಮಾತಾಗಿದೆ. ಆದ್ದರಿಂದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಸರ್ಕಾರ ಮತ್ತು ಸಮಾಜ ಸೂಕ್ತ ನೆರವು ನೀಡುವುದರ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರ ನೆರವಾಗಬೇಕೆಂದರು.

ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಧೀಕ್ಷಕ ಎಚ್.ಎ. ಚೌಗಲೆ, ಸಹಾಯಕ ಆಡಳಿತಾಧಿಕಾರಿ, ರಾಜೇಶ, ಜೈಲರ್ ಐ.ಎಸ್. ಹಿರೇಮಠ ಮತ್ತಿತರರಿದ್ದರು. ಚೇತನಾ ಎನ್.ಆರ್. ಸ್ವಾಗತಿಸಿದರು. ಲವಕುಮಾರ ಮನಗೂಳಿ ನಿರೂಪಿಸಿದರು. ಭೀಮಶಿ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net