ಎಸ್‌ಟಿ ಪ್ರಮಾಣ ಪತ್ರ ನೀಡಿ

Raju Alagur
Published on

ವಿಜಯಪುರ: ಕೇಂದ್ರ ಸರ್ಕಾರದ ಆದೇಶದ ಪ್ರಕಾರ ತಳವಾರ-ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣ ಪತ್ರ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ರಾಜು ಅಲಗೂರ ಆಗ್ರಹಿಸಿದರು.
ಕೇಂದ್ರ ಸರ್ಕಾರವು ಕಳೆದ ಮಾರ್ಚ್ 30ರಂದು ತಳವಾರ ಮತ್ತು ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ವಾಲ್ಮೀಕಿ ತಳವಾರ, ಪರಿವಾರ ಸಮುದಾಯವನ್ನು ಗಂಗಾಮತಸ್ಥ, ಅಂಬಿಗ, ತಳವಾರರೆಂದು ಹೇಳಿ ಪ್ರಮಾಣ ಪತ್ರವನ್ನು ಕೊಡದೇ ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೇ ವಾಲ್ಮೀಕಿ ತಳವಾರ, ಪರಿವಾರ ಸಮಾಜದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ತಳವಾರ, ಪರಿಹಾರ ಜಾತಿಯು ನಾಯಕ ಮತ್ತು ನಾಯ್ಕಡ ಜಾತಿಯ ಪರ್ಯಾಯ ಪದಗಳಾಗಿದ್ದು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಪಟ್ಟಿಯಲ್ಲೂ, ಮೀನುಗಾರ ಜನಾಂಗದ ಪಟ್ಟಿಯಲ್ಲೂ ಮತ್ತು ಕೇಂದ್ರ ಸರ್ಕಾರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಸಲ್ಲಿಸಿದ ಬೆಸ್ತ ಗಂಗಮತಸ್ಥ ಮುಂತಾದ 37 ಪರ್ಯಾಯ ಪದಗಳ ಪಟ್ಟಿಯಲ್ಲಿಯೂ ತಳವಾರ ಜನಾಂಗದ ಹೆಸರು ಉಲ್ಲೇಖವಾಗಿಲ್ಲ ಎಂದು ಹೇಳಿದರು.

ಅಟಲ್‌ಜಿ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಿದ ಪ್ರವರ್ಗ-1ರ ಪಟ್ಟಿಯಿಂದ ತಳವಾರ, ಪರಿವಾರ ಸಮುದಾಯಗಳನ್ನು ತೆಗೆದು ಪರಿಶಿಷ್ಟ ಪಂಗಡದ ಪಟ್ಟಿಗೆ ಕೂಡಲೇ ಸೇರಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪಷ್ಟ ನಿರ್ದೇಶನದ ಸುತ್ತೋಲೆಯನ್ನು ಹೊರಡಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಮ್ಮದ್ ರಫೀಕ್ ಟಪಾಲ್, ಡಾ. ಗಂಗಾಧರ ಸಂಭಣ್ಣಿ, ಸುರೇಶ ಘೊಣಸಗಿ, ಜಮೀರ್ ಬಕ್ಷಿ, ಐ.ಎಂ.ಇಂಡಿಕರ, ಸಾಹೇಬಗೌಡ ಬಿರಾದಾರ, ವಂಸತ ಹೊನಮೋಡೆ, ಇಲಿಯಾಸ್ ಬಗಲಿ, ಚನ್ನಬಪ್ಪ ನಂದರಗಿ, ದಾವಲಸಾಬ್ ಬಾಗವಾನ, ಹಾಜಿಲಾಲ ದಳವಾಯಿ, ಅಂಬಣ್ಣ ವಾಲಿಕಾರ, ತಮ್ಮಣ್ನ ಮೇಲಿನಕೇರಿ ಇದ್ದರು.

StartFragment

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net