ಗ್ರಾಹಕರ ಧರಣಿಗೆ ಪ್ರಾಂತ ರೈತ ಸಂಘ ಬೆಂಬಲ

VJP 27-2
Published on

ವಿಜಯಪುರ: ಮುರುಗೇಶ ನಿರಾಣಿ ಸೌಹಾರ್ದದ ವಿರುದ್ಧ ಜಿಲ್ಲಾ ಕೇಂದ್ರ ಸಹಕಾರ ಸಂಘಗಳ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಗ್ರಾಹಕರ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು ಪ್ರಾಂತ ರೈತ ಸಂಘ ಬೆಂಬಲ ವ್ಯಕ್ತಪಡಿಸಿತು.

ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಮುರುಗೇಶ ನಿರಾಣಿ ಅವರ ಹೆಸರನ್ನು ನೋಡಿ ಜನ ಕೋಟ್ಯಂತರ ರೂ. ಗಳನ್ನು ತೊಡಗಿಸಿದ್ದಾರೆ. ಈಗ 39 ಕೋಟಿ ರೂ. ಹಣವನ್ನು ಸೌಹಾರ್ದದದ ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಂಡಿದ್ದು, ಗ್ರಾಹಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಗ್ರಾಹಕರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಹಣ ದುರುಪಯೋಗ ಪಡಿಸಿಕೊಂಡ ಸಿಬ್ಬಂದಿಯನ್ನು ಕಾನೂನು ರೀತಿಯ ಕ್ರಮ ಜರುಗಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಸಿ ಗ್ರಾಹಕರಿಗೆ ಹಣ ಹಿಂದಿರುಗಿಸಬೇಕು ಎಂದರು.

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, 2 ದಿನ ಧರಣಿ ಮಾಡಿದ್ದೇವೆ. ಶನಿವಾರ ಮತ್ತು ಭಾನುವಾರದಂದು ಸರ್ಕಾರಿ ರಜೆ ಇರುವುದರಿಂದ 2 ದಿನದ ಧರಣಿಯನ್ನು ಸ್ಥಗಿತಗೊಳಿಸಿ ಮತ್ತೆ ಸೋಮವಾರದಂದು ನಿರಂತರವಾಗಿ ಧರಣಿ ಪ್ರಾರಂಭಿಸಲಾಗುವುದು. ಮಂಗಳವಾರದಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ರೈತ ಮುಖಂಡರಾದ ಸಿದ್ರಾಮ ರಂಜಣಗಿ, ಅಣ್ಣರಾಯ ಈಳಗೇರ, ರಾಹುಲ ಕುಬಕಡ್ಡಿ, ಶಕ್ತಿಕುಮಾರ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ಕುಶಾಲಸಿಂಗ ನರಗುಂದ, ಬಸವರಾಜ ಅಂಗಡಿ, ವಿಜಯ ಮಹಾಂತೇಶ ಪಡಶೆಟ್ಟಿ, ಬಸಪ್ಪ ಮುಳವಾಡ, ಎಂ.ಎಂ. ಜಾಲಗೇರಿ, ಸುಭಾಸ ಬಬಲೇಶ್ವರ, ಹಣಮಂತ ಉಪ್ಪಾರ, ಐ.ಬಿ. ಧಾರವಾಡ, ದೇವೇಂದ್ರಪ್ಪ ಕವಟೇಕರ, ಜಗದೀಶ ಹಿರೇಮಠ, ಭರತರಾಜ ಇಂಗಳೇ, ಅನಿಳ ಮುಳವಾಡ, ಬಸವರಾಜ ಬಾಡಗಿ, ಎ.ಎಂ. ಭೈರವಾಡಗಿ, ಎಚ್.ಬಿ. ಈಳಗೇರ, ರೇಣುಕಾ ಮಾಲಗಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net