

ವಿಜಯಪುರ: ಮಣ್ಣಿನ ಆರೋಗ್ಯ ರಕ್ಷಣೆಗಾಗಿ ನಿರಂತರ ಶ್ರಮವಹಿಸುತ್ತಿರುವ ಹಾಗೂ ಜಾಗೃತಿ ಮೂಡಿಸುತ್ತಿರುವ ಕೃಷಿ ವಿಜ್ಞಾನಿಗಳು ರೈತರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ಮಾಡಬೇಕೆಂದು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ. ಮಲ್ಲೇಶ ಹೇಳಿದರು. ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಣ್ಣಿನ ಮಹತ್ವದ ಬಗ್ಗೆ ಗಮನ ಹರಿಸುವ ಮತ್ತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಸಲಹೆ ನೀಡುವ ಸಲುವಾಗಿ ವಿಶ್ವ ಮಣ್ಣು ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತ ಬಾಂಧವರು ತಮ್ಮ ಮಣ್ಣಿನ ಸಂರಕ್ಷಣೆಗಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿ ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ ಬಳಸಬೇಕು ಎಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಬಿ. ಕಲಘಟಗಿ ಮಾತನಾಡಿ, 2002ರಿಂದ ಪ್ರತಿವರ್ಷ ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಬಾರಿ ‘ಮಣ್ಣನ್ನು ಜೀವಂತವಾಗಿ ಇರಿಸಿಕೊಳ್ಳಿ ಮತ್ತು ಮಣ್ಣಿನ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಿ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಒಂದು ಗ್ರಾಂ ಮಣ್ಣಿನಲ್ಲಿ 650 ಬಿಲಿಯನ್ ಸೂಕ್ಷ್ಮಾಣುಜೀವಾಣುಗಳಿವೆ. ಸಸ್ಯಗಳ ಬೆಳವಣಿಗೆಗೆ ಹದಿನೇಳು ಪೋಷಕಾಂಶಗಳ ಅವಶ್ಯವಿದ್ದು ರೈತರು ಮಣ್ಣಿನ ಆರೋಗ್ಯ ರಕ್ಷಣೆಯ ಕುರಿತು ವಿಶೇಷ ಕಾಳಜಿ ವಹಿಸಬೇಕೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಯಾವ ಋಣವನ್ನಾದರೂ ತೀರಿಸಬಹುದು. ಆದರೆ, ಮಣ್ಣಿನ ಋಣ ತೀರಿಸಲಾಗದು ಎಂಬ ಮಾತಿದೆ. ಮಣ್ಣು ಇಲ್ಲದೆ ಜೀವ ಸಂಕುಲವಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಮಣ್ಣಿನ ಆರೋಗ್ಯ ಕಾಪಾಡಬೇಕು ಎಂದರು.
ರೈತರು ಅಗತ್ಯಕ್ಕಿಂತ ಅಧಿಕ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕ ಬಳಕೆ ಮಾಡುತ್ತಿದ್ದು, ಇದರಿಂದ ಮಣ್ಣಿನ ಲವತ್ತತೆ ಕುಸಿಯುತ್ತಿದೆ. ಒಂದು ಇಂಚು ದಪ್ಪದ ಮಣ್ಣಿನ ಪದರ ಬೆಳೆಯುವುದಕ್ಕೆ ಕನಿಷ್ಠ 10 ಸಾವಿರ ವರ್ಷಗಳು ಬೇಕಾಗುತ್ತಿವೆ. ರೈತರು ಅದರ ಮಹತ್ವ ಅರಿತು ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಿ, ಮುಂದಿನ ಪೀಳಿಗೆಗೆ ಲವತ್ತಾದ ಆರೋಗ್ಯವಂತ ಮಣ್ಣನ್ನು ಬಳುವಳಿಯಾಗಿ ನೀಡಬೇಕು ಎಂದು ತಿಳಿಸಿದರು. ಸಹ ಸಂಶೋಧನಾ ನಿರ್ದೇಶಕ ಡಾ. ಎ.ಕೆ. ಗುಗ್ಗರಿ, ಉದ್ಯಮಿ ಮಹಮ್ಮದ ಹನೀಫ್, ಅಬ್ದುಲ್ ರಜಾಕ್, ಸಿ.ಕೆ. ಸುರೇಶ, ಡಾ.ಪ್ರೇಮಾ ಪಾಟೀಲ, ಡಾ. ಬಿ.ಸಿ. ಕೊಲ್ಹಾರ, ಡಾ. ಶಿವಲಿಂಗಪ್ಪ ಹೋಟಕರ, ಡಾ. ಸಂಗೀತಾ ಜಾಧವ, ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.