

ವಿಜಯಪುರ: ಸಾಹಿತ್ಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಸಿ.ಕೆ. ರಾಮೇಗೌಡ ಹೇಳಿದರು.
ಉತ್ತರ ಕರ್ನಾಟಕ ತನ್ನದೇ ಆದ ಸಾಹಿತ್ಯಿಕ ಹಿರಿಮೆ ಹೊಂದಿದೆ. ಇಲ್ಲಿನ ಭಾಷೆ, ಸಂಸ್ಕೃತಿ, ವೇಷ-ಭೂಷಣಗಳು ಪ್ರತಿಯೊಂದು ವಿಭಿನ್ನ ಮತ್ತು ವಿಶೇಷವಾಗಿದೆ. ಈ ನೆಲದ ಶ್ರೇಷ್ಠ ಸಂಸ್ಕೃತಿ ಎತ್ತಿ ಹಿಡಿಯುವ ಕಾರ್ಯ ಮಾಡುವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸುಮಾರು 35 ವರ್ಷಗಳ ನಿರಂತರ ಕನ್ನಡ ಸೇವೆಗೆಯ್ಯುತ್ತಾ ಬಂದಿರುವ ನಾನು ಬೆಂಗಳೂರು ನಗರ ಜಿಲ್ಲಾಧ್ಯಕ್ಷನಾಗಿ ಹಾಗೂ ಒಂದು ಅವಧಿಗೆ ಕೇಂದ್ರ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತೇನೆ. ನನಗೆ ಅಧಿಕ ಮತಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ. ಪೂಜಾರ ಮಾತನಾಡಿ, ಕಸಾಪ ಚುನಾವಣೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಸಿ.ಕೆ. ರಾಮೇಗೌಡರಿಗೆ ಬೆಂಬಲ ಸೂಚಿಸುವುದರಲ್ಲದೇ, ಪರಿಷತ್ತು ಸದಾ ಕ್ರಿಯಾಶೀಲವಾಗಿರಬೇಕು. ಹೊಸ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಿ ಸಾಹಿತ್ಯ ಸಮ್ಮೇಳನಗಳ ಗೋಷ್ಟಿಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಸೃಜನಶೀಲ ಸಾಹಿತ್ಯ ಬೆಳೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಂಕರ ಹೂಗಾರ, ಸುಭಾಸ ಬಸವರೆಡ್ಡಿ, ಎಸ್.ಎಸ್. ವಿಭೂತಿಹಳ್ಳಿ ಮತ್ತಿತರರಿದ್ದರು.