

ಹೀರಾನಾಯ್ಕ ಟಿ. ವಿಜಯಪುರ
ದೇಶವನ್ನೇ ಬೆಚ್ಚಿಬೀಳಿಸುತ್ತಿರುವ ಕರೊನಾ ಮಹಾಮಾರಿಯಿಂದಾಗಿ ಜನೌಷಧ ಕೇಂದ್ರಗಳ ಮೇಲೂ ಕರಿ ನೆರಳು ಬಿದ್ದಿದೆ. ಲಾಕ್‌ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ಜನೌಷಧ ಕೇಂದ್ರಗಳಲ್ಲಿ ಔಷಧ ಕೊರತೆ ಕಾಡುತ್ತಿದೆ. ರಾಜ್ಯದ ಜನೌಷಧ ಕೇಂದ್ರಗಳಿಗೆ ದೆಹಲಿ ಹಾಗೂ ಚೆನ್ನೈಯಿಂದ ಔಷಧಗಳನ್ನು ಪೂರೈಸಲಾಗುತ್ತದೆ. ಆದರೆ ಅಲ್ಲಿಯೂ ಕರೊನಾ ಅಟ್ಟಹಾಸದಿಂದಾಗಿ ಸಂಪೂರ್ಣ ಲಾಕ್‌ಡೌನ್ ಆಗಿದೆ. ಹೀಗಾಗಿ ಜನರಿಗೆ ಅಗ್ಗದ ಔಷಧ ಕೈ ಸೇರುವುದರಲ್ಲಿ ವಿಳಂಬವಾಗಿದೆ.
ರಾಜ್ಯದಲ್ಲಿ ಇದೀಗ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವುದರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್, ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧ ಸಿಗದೇ ಪರದಾಡುವಂತಾಗಿದೆ. ರಾಜ್ಯಕ್ಕೆ ಹೆಚ್ಚಾಗಿ ಮಧ್ಯಪ್ರದೇಶದ ಇಂಧೋರ್, ಗುಜರಾತ್‌ನ ಅಹಮದಾಬಾದ್, ಹೈದರಾಬಾದ್,ಚೆನ್ನೈ, ದೆಹಲಿಯಿಂದ ಹೆಚ್ಚಾಗಿ ಔಷಧಗಳು ಪೂರೈಕೆ ಆಗುತ್ತದೆ. ದೇಶದಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಆಯಾ ರಾಜ್ಯಗಳಲ್ಲಿ ಲಾಕ್‌ಡೌನ್ ಇರುವುದರಿಂದ ಔಷಧಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.
ಮಧುಮೇಹ, ರಕ್ತದೊತ್ತಡ ಇನ್ನಿತರ ಕಾಯಿಲೆಗಳಿಗೆ ಪ್ರತಿ ದಿನ ಔಷಧ ಸೇವನೆ ಅಗತ್ಯವಾಗಿದ್ದು, ಶ್ರೀಮಂತರು ಮುಂಗಡವಾಗಿ ಔಷಧ ಖರೀದಿಸಿದ್ದಾರೆ. ಅದರಿಂದ ಶೇ. 70 ರಷ್ಟು ಔಷಧಗಳ ಕೊರತೆ ಕಾಡುತ್ತಿದ್ದು, ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ.
ಕಡಿಮೆ ದರದಲ್ಲಿ ಬಡವರಿಗೆ ಔಷಧ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಜನೌಷಧಿ ಸುಗಮ್ ಆ್ಯಪ್ ಮೂಲಕ ಜನರಿಗೆ ಔಷಧ ಪೂರೈಸಲಾಗುತ್ತಿದೆ. ಗೂಗಲ್ ಪ್ಲೆ ಸ್ಟೊರ್ ಮೂಲಕ ‘ಜನೌಷಧಿ ಸುಗಮ್’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ತಮ್ಮ ಸ್ವ ವಿವರ, ಮೊಬೈಲ್ ಸಂಖ್ಯೆಯನ್ನು ದಾಖಲು ಮಾಡಿ ಇನ್‌ಸ್ಟಾಲ್ ಮಾಡಬೇಕು. ಬಳಿಕ ಬೇಕಾದಾಗ ನೀಡಿರುವ ಮೊಬೈಲ್ ಸಂಖ್ಯೆಯನ್ನೆ ಲಾಗಿನ್ ಐಡಿ ಆಗಿ ಬಳಸಿ ಪಾಸ್‌ವರ್ಡ್ ಹಾಕಿ ಲಾಗ್‌ಇನ್ ಆಗಬಹುದು. ಆ ಮೂಲಕ ಸ್ಥಳೀಯ ಜನೌಷಧ ಕೇಂದ್ರಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ಔಷಧ ಮಳಿಗೆ ಸಿಬ್ಬಂದಿ ಮನೆ ಮನೆಗೆ ತೆರಳಿ ಔಷಧ ಪೂರೈಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಪ್ರತಿ ಜನೌಷಧ ಕೇಂದ್ರದಿಂದ ಇಬ್ಬರು ಸಿಬ್ಬಂದಿಗೆ ಆಯಾ ಜಿಲ್ಲಾಡಳಿತದಿಂದ ಮನೆ ಮನೆಗೆ ಔಷಧ ರವಾನೆಗೆ ಅನುಮತಿ ನೀಡಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎನ್ನುತ್ತಾರೆ ವಿಜಯಪುರದ ಜನೌಷಧ ಕೇಂದ್ರದ ಮಾಲೀಕ ರಾಜು ಜನಗೊಂಡ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಹೋದರೆ ಅವರಿಗೆ ವೈದ್ಯರು ಬ್ರಾೃಂಡೆಡ್ ಔಷಧಗಳನ್ನು ಬರೆದುಕೊಡುತ್ತಿದ್ದಾರೆ. ಅವು ಜನೌಷಧ ಕೇಂದ್ರಗಳಲ್ಲಿ ಕೇಳಿದರೆ ಲಭ್ಯ ಇಲ್ಲ ಎನ್ನುತ್ತಾರೆ. ಇದರಿಂದಾಗಿ ಅನಿವಾರ್ಯವಾಗಿ ರೋಗಿಗಳು ಖಾಸಗಿ ಔಷಧ ಮಳಿಗೆಗಳಿಗೆ ತೆರಳುವಂತಾಗಿದೆ. ಅಲ್ಲಿಯೂ ಔಷಧದ ಕೊರತೆ ಕಾಡುತ್ತಿದ್ದು, ದುಬಾರಿ ಬೆಲೆಯ ಔಷಧ ಖರೀದಿಸಲಾಗದೆ ರೋಗಿಗಳು ಪರದಾಡುವಂತಾಗಿದೆ.
ಕಳೆದ ಐದು ವರ್ಷಗಳಿಂದ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ಅದಕ್ಕೆ ಪ್ರತಿ ದಿನ ಮಾತ್ರೆಗಳನ್ನು ಸೇವಿಸಬೇಕು. ಆದರೆ ಮಾತ್ರೆಗಳು ಲಭ್ಯವಾಗುತ್ತಿಲ್ಲ. ಕೇಳಿದರೆ ಮಾತ್ರೆ ಖಾಲಿ ಆಗಿವೆ ಎಂದು ಔಷಧ ಮಾರಾಟಗಾರರು ಹೇಳುತ್ತಾರೆ.
ಜಯಶ್ರೀ ಕುಲಕರ್ಣಿ, ಮಧುಮೇಹಿ, ವಿಜಯಪುರ
ಲಾಕ್‌ಡೌನ್ ಹಿನ್ನೆಲೆ ಔಷಧ ಪೂರೈಕೆಯಲ್ಲಿ ಬಹಳಷ್ಟು ವಿಳಂಬ ಆಗುತ್ತಿದೆ. ವಿಆರ್‌ಎಲ್ ಸೇರಿದಂತೆ ಖಾಸಗಿ ಸಾರಿಗೆ ಸಂಸ್ಥೆಗಳ ಮೂಲಕ ಹೆಚ್ಚಾಗಿ ಔಷಧಗಳು ಪೂರೈಕೆ ಆಗುತ್ತವೆ. ಆದರೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಔಷಧಗಳು ಪೂರೈಕೆ ಆಗುತ್ತಿಲ್ಲ. ರಮೇಶ ಪೋರವಾಲ, ಕಾರ್ಯದರ್ಶಿ, ಔಷಧ ವ್ಯಾಪಾರಸ್ಥರ ಸಂಘ, ವಿಜಯಪುರ