ವೆಲೊಡ್ರೋಮ್ ಕಾಮಗಾರಿಗೆ ಮರು ಜೀವ

HN 7-3
Published on

ವಿಜಯಪುರ: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿಗೆ ಮರು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಸೂಚನೆ ನೀಡಿದ್ದಾರೆ.
ಇಲ್ಲಿನ ಹೊರವಲಯ ಭೂತನಾಳ ಬಳಿ ನನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿ ಅವರು ಕಾಮಗಾರಿ ಪ್ರಾರಂಭಕ್ಕೆ ಅಗತ್ಯ ಯೋಜನೆ ರೂಪಿಸಿಕೊಳ್ಳಲು ತಿಳಿಸಿದ್ದಾರೆ.
ಸೈಕ್ಲಿಂಗ್ ತವರೂರು ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಏಕೈಕ ವೆಲೊಡ್ರೋಮ್ ಕಾಮಗಾರಿ ಅನೇಕ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದು, ಇದರಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳ ಕನಸು ಕಮರಿತ್ತು. ಇದೀಗ ಅದಕ್ಕೆ ಮರು ಜೀವ ಬಂದಂತಾಗಿದೆ.

4 ವರ್ಷದಿಂದ ಕಾಮಗಾರಿ ವಿಳಂಬ

ಕಳೆದ 2016ರ ಅ.25 ರಂದು ಪ್ರಾರಂಭಗೊಂಡ ವೆಲೊಡ್ರೋಮ್ ಕಾಮಗಾರಿ ಅನೇಕ ತಾಂತ್ರಿಕ ಸಮಸ್ಯೆಗಳಿಂದ ನನೆಗುದಿಗೆ ಬಿದ್ದಿದೆ. 2003ರಲ್ಲಿ ಜಿಲ್ಲಾಡಳಿತ 8 ಎಕರೆ 10 ಗುಂಟೆ ಜಾಗವನ್ನು ಮಂಜೂರು ಮಾಡಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ. 2008ರಲ್ಲಿ ಉದ್ದೇಶಿತವಾಗಿ ವೆಲೊಡ್ರೋಮ್‌ನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಹುನ್ನಾರಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. 2009ರಲ್ಲಿ 3.90 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅಂದಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಶಿಲಾನ್ಯಾಸ ನೆರವೇರಿಸಿದ್ದರು. ನಂತರ ಅಪ್ಪಚ್ಚು ರಂಜನ್ ಕ್ರೀಡಾ ಸಚಿವರಾಗಿದ್ದಾಗಲೂ ವೆಲೊಡ್ರೋಮ್ ಪೂರ್ಣಗೊಳ್ಳಲಿಲ್ಲ. 2015ರಲ್ಲಿ 7.50 ಕೋಟಿ ರೂ. ಪರಿಷ್ಕೃತ ವೆಚ್ಚದ ಕಾಮಗಾರಿಗೆ ಆಗಿನ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಚಾಲನೆ ನೀಡಿದ್ದರು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ಸೈಕ್ಲಿಸ್ಟ್‌ಗಳ ಕನಸಿಗೆ ಮಂಕು ಕವಿಯುವಂತೆ ಮಾಡಿದೆ.

ಏನಿದು ತಾಂತ್ರಿಕ ಸಮಸ್ಯೆ

ಅಂತಾರಾಷ್ಟ್ರಮಟ್ಟದ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವೆಲೊಡ್ರೋಮ್‌ಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. 333.33 ಮೀ. ಸುತ್ತಳತೆಯಲ್ಲಿ 360 ಡಿಗ್ರಿ ತಿರುವು ಹಾಗೂ ಎತ್ತರ, ಎರಡು ಕಡೆ ಸಮತಟ್ಟು ಹೊಂದುವ ರೀತಿ ನಿರ್ಮಿಸಬೇಕು. ವೆಲೊಡ್ರೋಮ್ ನಿರ್ಮಾಣ ಹಂತದಲ್ಲಿ ನಾಲ್ಕು ಕಡೆಗಳಲ್ಲಿ 30 ಮೀಟರ್ ತಿರುವುಗಳ ಜೋಡಣೆ ಕಾರ್ಯ ಆಗಬೇಕಿದೆ. ಅದು ಇನ್ನೂ ಆಗಿಲ್ಲ. ದಾವಣಗೆರೆಯ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದ್ದು, ತಜ್ಞರ ಕೊರತೆಯಿಂದ ಕಾಮಗಾರಿಗೆ ಅಡೆತಡೆಯಾಗಿದೆ ಎಂದು ಸೈಕ್ಲಿಂಗ್ ಸಂಸ್ಥೆ ಜಿಲ್ಲಾಧ್ಯಕ್ಷ ರಾಜು ಬಿರಾದಾರ ಮಾಹಿತಿ ನೀಡುತ್ತಾರೆ.

ಡಿಸಿ ಅವರಿಂದ ವೀಕ್ಷಣೆ

ಭೂತನಾಳದಲ್ಲಿ ನಿರ್ಮಾಣ ಹಂತದಲ್ಲಿರುವ ವೆಲೊಡ್ರೋಮ್ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ವೀಕ್ಷಣೆ ಮಾಡಿದರು. ಸೈಕ್ಲಿಂಗ್ ೆಡರೇಷನ್ ಆ್ ಇಂಡಿಯಾದ ಸಂಸ್ಥೆಯ ನುರಿತ ತಜ್ಞರನ್ನು ಕರೆಸಿ ಸೂಕ್ತ ತಾಂತ್ರಿಕ ಸಲಹೆ ಪಡೆದು ಕಾಮಗಾರಿ ಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದರು. 2018 ೆಬ್ರುವರಿಯಲ್ಲಿ ತಾಂತ್ರಿಕ ದೋಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಮರು ಕಾಮಗಾರಿ ಕೈಗೊಳ್ಳಲು ಬೇಕಾದ ವ್ಯವಸ್ಥಿತವಾದ ಕಾರ್ಯ ಯೋಜನೆ ರೂಪಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರಾಜು ಬಿರಾದಾರ, ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಹರೀಶ್, ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ, ಸೈಕ್ಲಿಂಗ್ ತರಬೇತಿದಾರೆ ಅಲ್ಕಾ ಪಡೆತಾರೆ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net