

ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ, ಭೀಮಾ ನದಿ ಪ್ರವಾಹದಿಂದ ಬಾಧಿತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ತಿಳಿಸಿದ್ದಾರೆ.
4041 ಕುಟುಂಬಗಳು ನಷ್ಟ ಅನುಭವಿಸಿದ್ದು, ಈಗಾಗಲೇ 1335 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. 2706 ಕುಟುಂಬಗಳಿಗೆ ಶೀಘ್ರ ಪರಿಹಾರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಚಡಚಣ ತಾಲೂಕು ವ್ಯಾಪ್ತಿ 263, ಸಿಂದಗಿ 141, ಇಂಡಿ 931 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಅಲ್ಲದೆ, ರೆಡ್‌ಕ್ರಾಸ್ ಸಂಸ್ಥೆಯಿಂದ ಬಟ್ಟೆ-ಬರೆ, ಚಾಪೆ, ದಿನಸಿ ಸಾಮಗ್ರಿ ಒಳಗೊಂಡಂತೆ 1500 ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಬಟ್ಟೆ ಸೋಪ್, ಟೂತ್‌ಪೇಸ್ಟ್, ಕೊಬ್ಬರಿ ಎಣ್ಣೆ ಒಳಗೊಂಡಂತೆ 20 ಸಾವಿರ ಕಿಟ್‌ಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.