

ಹೀರಾನಾಯ್ಕ ಟಿ. ವಿಜಯಪುರ
ಕರೊನಾ ಮಹಾಮಾರಿಯಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಪ್ರವಾಸೋದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ಪ್ರವಾಸಿಗರಿಲ್ಲದೆ ತಾಣಗಳೆಲ್ಲ ಬಿಕೋ ಎನ್ನುತ್ತಿವೆ. ವಿಜಯಪುರ ಹೊರವಲಯದಲ್ಲಿರುವ ಬೇಗಂ ತಲಾಬ್ ಕೆರೆಯಲ್ಲಿನ ಬೋಟಿಂಗ್ ವ್ಯವಸ್ಥೆಗೂ ಗ್ರಹಣ ಹಿಡಿದಿದೆ.
ಪ್ರತಿದಿನ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಬೇಗಂ ತಲಾಬ್ ಕೆರೆ ಅಂಗಳದಲ್ಲಿ ಯಾರು ಇಲ್ಲದೆ ಇರುವುದರಿಂದ ಒಂದು ರೀತಿಯ ಸ್ಮಶಾನಮೌನ ಆವರಿಸಿದಂತಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರಂಭಗೊಂಡಿದ್ದ ಬೋಟಿಂಗ್ ವ್ಯವಸ್ಥೆಯಿಂದಾಗಿ ಜಿಲ್ಲೆಯ ಪ್ರವಾಸಿಗರನ್ನು ಕಣ್ಮನ ಸೆಳೆದಿತ್ತು. ಇದೀಗ ಕರೊನಾದಿಂದಾಗಿ ಬೋಟಿಂಗ್ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ದಿನಾಚರಣೆ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿಗರನ್ನು ಸೆಳೆಯಲು ಬೇಗಂ ತಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಆರಂಭಿಸಿತು. ಆಲಮಟ್ಟಿಯ ದರ್ಶನ ಉದ್ಯೋಗ ಸಮೂಹ ಸಂಸ್ಥೆಗೆ ಟೆಂಡರ್ ವಹಿಸಿದ್ದು, ಆರಂಭದ ಮೂರು ತಿಂಗಳು ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ ಕರೊನಾದಿಂದಾಗಿ ಇದೀಗ ಮಾರ್ಚ್ 10ರಿಂದ ಸ್ಥಗಿತಗೊಂಡಿದೆ. ಕಳೆದ ನಾಲ್ಕು ತಿಂಗಳಿಂದ ಬೋಟಿಂಗ್ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿದೆ.
ಬೋಟಿಂಗ್ ಟೆಂಡರ್ ಹಿಡಿದ ದರ್ಶನ ಉದ್ಯೋಗ ಸಂಸ್ಥೆ ವಾರ್ಷಿಕವಾಗಿ ಜಿಲ್ಲಾಡಳಿತಕ್ಕೆ 8.38 ಲಕ್ಷ ರೂ. ವಂತಿಗೆ ನೀಡಬೇಕಿದೆ. ಪ್ರತಿ ತಿಂಗಳು ಸರಾಸರಿ 70 ಸಾವಿರ ರೂ. ವಂತಿಗೆ ನೀಡಬೇಕಿದೆ. ಈಗಾಗಲೇ ಮೂರು ತಿಂಗಳ ವಂತಿಗೆ 2.10 ಲಕ್ಷ ರೂ. ಈಗಾಗಲೇ ಸಂಸ್ಥೆ ಜಿಲ್ಲಾಡಳಿತಕ್ಕೆ ಪಾವತಿಸಿದೆ. ಇನ್ನುಳಿದ ಹಣ ಪಾವತಿಸಬೇಕಿದೆ. ಬೋಟಿಂಗ್ ವ್ಯವಸ್ಥೆ ನಿರ್ವಹಣೆಗೆ ಆರು ಜನ ಸಿಬ್ಬಂದಿ ಇದ್ದು, ಪ್ರತಿಯೊಬ್ಬರಿಗೆ 12 ಸಾವಿರ ರೂ. ನಂತೆ ತಿಂಗಳ ಸಂಬಳ ನೀಡಬೇಕಿದೆ. ಆದರೆ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸಂಬಳ ನೀಡಲು ಹಣ ಇಲ್ಲದಂತಾಗಿದೆ ಎನ್ನುತ್ತಾರೆ ಸಂಸ್ಥೆಯ ನಿರ್ವಹಣಾ ವ್ಯವಸ್ಥಾಪಕ ಮಂಜು ಹಿರೇಮಠ.
ಬೇಗಂ ತಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ನಿರ್ವಹಣೆಗೆ ಪ್ರವಾಸಿಗರನ್ನು ಸಳೆಯಲು ಅನೇಕ ಬೋಟ್‌ಗಳನ್ನು ನೀರಿಗೆ ಇಳಿಸಲಾಗುತ್ತಿತ್ತು. 8 ಕಯಾಕಿಂಗ್, 4 ಪೆಡಲ್ ಬೋಟ್, 2 ಮೋಟಾರ್ ಬೋಟ್, 1 ಮೋಟಾರ್ ಚಾಲಿತ ಪಾರ್ಟಿ ಬೋಟ್, 1 ಸ್ಪೀಡ್ ಸ್ಕೂಟರ್ ಬೋಟ್, 1 ರ‌್ಯಾಪ್ಟ್ ಬೋಟ್ ವ್ಯವಸ್ಥೆ ಇದೆ. ಪೆಡಲ್ ಬೋಟ್‌ಗೆ 100 ರೂ. ರ‌್ಯಾಪ್ಟ್ 50 ರೂ. ಕಯಾಕಿಂಗ್ (ಇಬ್ಬರಿಗೆ) 150 ರೂ., ಸ್ಕೂಟರ್ ಬೋಟ್ (ಒಬ್ಬರಿಗೆ)ಗೆ 200 ರೂ. ಶುಲ್ಕ ವಿಧಿಸಲಾಗುತ್ತದೆ.
ಬೇಗಂ ತಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಯಿಂದಾಗಿ ಪ್ರತಿ ದಿನ 3-5 ಸಾವಿರ ರೂ. ಹಾಗೂ ವಿಕೆಂಡ್‌ನಲ್ಲಿ 6-7 ಸಾವಿರ ರೂ. ಕಲೆಕ್ಟ್ ಆಗುತ್ತಿತ್ತು. ಬೋಟಿಂಗ್ ನಿರ್ವಹಣೆ ಹಾಗೂ ವಂತಿಗೆ ಕಟ್ಟಲು ತಿಂಗಳಿಗೆ 2 ಲಕ್ಷ ರೂ. ಖರ್ಚು ಬರುತ್ತದೆ. ಆದರೆ ಇದೀಗ ಬೋಟಿಂಗ್ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ.
ದಿಲೀಪ್ ಎಸ್ ಕಾಟೆಹಳ್ಳಿ, ವ್ಯವಸ್ಥಾಪಕ, ದರ್ಶನ ಉದ್ಯೋಗ ಸಮೂಹ ಸಂಸ್ಥೆ