

ವಿಜಯಪುರ: ಬಸವಣ್ಣ ಅವರು ಸಮಾನತೆಯ ಪ್ರತಿಪಾದಕರಾಗಿದ್ದರು ಎಂದು ಶೂನ್ಯಪೀಠ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಅವರು ಮಾನವಕುಲ ಶ್ರೇಷ್ಠ. ಮೇಲು ಕೀಳು ಮಾಡದೆ ಸಮಾನತೆಯ ಸಮಾಜ ನಿರ್ಮಿಸುವ ಅವರ ಕನಸು ಅಚಲವಾಗಿತ್ತು. ವಚನಗಳ ಮೂಲಕ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಕಾಯಕ, ದಾಸೋಹ ಸಿದ್ಧಾಂತಕ್ಕೆ ಮಹತ್ವ ನೀಡಿದ್ದರು ಎಂದು ಸ್ಮರಿಸಿದರು.
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಜಿಲ್ಲಾಧ್ಯಕ್ಷ ವಿಜಯಕುಮಾರ ಘಾಟಗೆ ಮಾತನಾಡಿ, ಬಸವಣ್ಣ ಅವರು ಮಹಾನ್ ಸಮಾಜವಾದಿಯಾಗಿದ್ದರು. ಸಮಾಜದ ಸರ್ವಾಂಗೀಣ ಪ್ರಗತಿಗೆ ಕಾಯಕ ಸಂಸ್ಕೃತಿ ಅತ್ಯವಶ್ಯ. ದುಡಿಮೆ, ಸತ್ಯ ಶುದ್ಧವಾಗಿರಬೇಕು. ಇತರರನ್ನು ನೋಯಿಸಿ, ವಂಚಿಸಿ, ಬಳಲಿಸಿ ತಂದ ಸಂಪತ್ತು ಅತ್ಯಂತ ಕಟುವಾಗಿ ಟೀಕಿಸಿ ಅದು ದೇವರಿಗೆ ಸಲ್ಲದು ಎಂದು ಸ್ಪಷ್ಟವಾಗಿ ನಿಂದಿಸಿದ್ದರು. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದರು. ಮುಖಂಡರಾದ ಆಕಾಶ ಹಿಪ್ಪರಗಿ, ಸಚೀನ ರಾಠೋಡ ಉಪಸ್ಥಿತರಿದ್ದರು.