ಮೆಡಿಕಲ್ ಬಂದ್ ಕರೆಗೆ ಸಕಾರಾತ್ಮಕ ಸ್ಪಂದನೆ

VJP-11-3(2)
Published on

ವಿಜಯಪುರ: ಆಯುಷ್ ವೈದ್ಯರಿಗೆ ಅಲೋಪಥಿ ಶಸ್ತ್ರ ಚಿಕಿತ್ಸೆ ಮಾಡಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ನೀತಿ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ದೇಶಾದ್ಯಂತ ಮೆಡಿಕಲ್ ಬಂದ್ ಕರೆ ಸಫಲವಾಗಿದೆ.

ಶುಕ್ರವಾರ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಹೊರ ರೋಗಿ ಚಿಕಿತ್ಸೆ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬೆಳಗ್ಗೆಯಿಂದಲೇ ಹೊರ ರೋಗಿಗಳ ಚಿಕಿತ್ಸೆ ಅಲಭ್ಯವಾಗಿತ್ತು. ಆಸ್ಪತ್ರೆ ಹತ್ತಿರದ ಕೆಲವು ಮೆಡಿಕಲ್ ಹೊರತುಪಡಿಸಿ ಇನ್ನುಳಿದ ಮೆಡಿಕಲ್‌ಗಳು ಬಂದ್ ಆಗಿದ್ದವು. ಹೀಗಾಗಿ ರೋಗಿಗಳು ಪರದಾಡಬೇಕಾಯಿತು.

ಬೃಹತ್ ಪ್ರತಿಭಟನೆ: ಜಿಲ್ಲಾಡಳಿತ ಕಚೇರಿ ಎದುರು ನೂರಾರು ವೈದ್ಯರು ಹಾಗೂ ಸಿಬ್ಬಂದಿ ಕೆಲ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ನೀತಿ ವಿರುದ್ಧ ಘೋಷಣೆ ಕೂಗಿದರು. ಈ ಅಧಿಸೂಚನೆಯನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಪ್ರಧಾನಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಸಂತೋಷ ನಂದಿ ಮಾತನಾಡಿ, ಸರ್ಕಾರ ‘ಕಿಚಡಿ’ ಪದ್ಧತಿ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಎಂಬಿಬಿಎಸ್ ಕಲಿತು ಅಂದಾಜು 9-10 ವರ್ಷದ ತೀವ್ರವಾದ ತರಬೇತಿಯಿಂದ ಅಲೋಪಥಿ ಸರ್ಜನ್ ತಯಾರಾಗುತ್ತಾರೆ. ಆದರೆ, ಕೇಂದ್ರ ಸರ್ಕಾರದ ಹೊಸ ಅಧಿಸೂಚನೆಯಂತೆ ಆಯುರ್ವೇದ, ಯುನಾನಿ ಕಲಿತವರು ಕೇವಲ 8 ತಿಂಗಳ ಅಲೋಪಥಿ ಟ್ರೇನಿಂಗ್ ಪಡೆದು ಸರ್ಜನ್‌ಗಳಾಗುವುದೆಂದರೆ ಅದೊಂದು ಘೋರ ದುರಂತ ಎಂದರು.

ಇಂಥ ವೈದ್ಯರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಆಗವುದಲ್ಲದೆ ಸಾವು ನೋವಿನ ಪ್ರಮಾಣ ಸಹ ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಈ ಅಧಿಸೂಚನೆಯಿಂದ ಅಂದಾಜು 10 ವರ್ಷಗಳ ಕಾಲ ನಿರಂತರ ಅಭ್ಯಾಸ ಮಾಡಿ ಅಲೋಪಥಿ ಸರ್ಜನ್ ಆದವರಿಗೆ ಘೋರ ಅನ್ಯಾಯವಾಗುತ್ತದೆ. ನಾವು ಆಯುರ್ವೇದ ಚಿಕಿತ್ಸೆಗೆ ಯಾವುದೇ ವಿರೋಧ ವ್ಯಕ್ತ ಪಡಿಸುತ್ತಿಲ್ಲ, ಅದಕ್ಕೆ ಅದರದ್ದೇ ಆದ ಇತಿಹಾಸವಿದೆ, ಆಯುರ್ವೇದ ಇನ್ನೂ ತುಂಬಾ ಚೆನ್ನಾಗಿ ಬೆಳವಣಿಗೆ ಆಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಲ್ಲಿ ನಮ್ಮ ಭಾರತೀಯ ವೈದ್ಯಕಿಯ ಸಂಘ ಬೆಂಬಲಿಸಲಿದೆ. ಅದನ್ನು ಬಿಟ್ಟು ಆಯುರ್ವೇದ ಕಲಿತವರಿಗೆ ಕೆಲವೇ ತಿಂಗಳುಗಳ ಅಲೋಪಥಿ ಟ್ರೇನಿಂಗ್ ಕೊಟ್ಟು ಕಿಚಡಿ ವೈದ್ಯರಾನ್ನಾಗಿ ಮಾಡುವುದು ಬಿಡಬೇಕೆಂದರು.

ಡಾ. ಮೊಹಮ್ಮದ್ ಸಿದ್ದಿಕ್, ಡಾ. ಜಸ್ಪಾಲ್ ಸಿಂಗ್, ಡಾ. ರವಿಕುಮಾರ ಚೌಧರಿ, ಡಾ. ಪ್ರಕಾಶ ಸಾಸಾನೂರ, ಡಾ. ಆನಂದ ಪಾಟೀಲ(ಶೇಗುಣಸಿ), ಡಾ. ಜಿಲಾನಿ, ಡಾ.ಎಸ್.ಎಸ್. ಪಾಟೀಲ, ಡಾ. ಗಿರೀಶ ಕುಳ್ಳೋಳ್ಳಿ, ಡಾ. ರವೀಂದ್ರ ಮದ್ರಕಿ, ಡಾ. ಪ್ರೀತೀಶ ಎಂಡಿಗೇರಿ, ಡಾ.ಸುರೇಶ ಕಾಗಲಕರರೆಡ್ಡಿ, ಡಾ.ಕಿರಣ ಒಸ್ವಾಲ್, ಡಾ.ಎಲ್.ಎಚ್. ರಾಠೋಡ, ಡಾ. ರಮಕಾಂತ ಬಾಳುರ್ಕರ, ಡಾ.ರವಿ ಬಿರಾದಾರ, ಡಾ. ದಯಾನಂದ ಬಿರಾದಾರ, ಡಾ. ಶೈಲೇಶ ದೇಶಪಾಂಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net