

ವಿಜಯಪುರ: ಐತಿಹಾಸಿಕ ನಗರಿ, ಗುಮ್ಮಟ ನಗರಿ ಎಂದೆಲ್ಲಾ ಹಿರಿಮೆ ಹೊತ್ತ ವಿಜಯಪುರ ಈಗ ಗುಂಡಿಗಳ ನಗರಿಯಾಗಿ ಮಾರ್ಪಟ್ಟಿದೆ…!
ನಗರದ ಪ್ರಮುಖ ರಸ್ತೆಗಳು ಗುಂಡಿಗಳಿಂದ ಆವೃತ್ತವಾಗಿದ್ದು, ಸುಧಾರಿತ ರಸ್ತೆಗಳು ದುರ್ಬಿನ್ ಹಚ್ಚಿದರೂ ಸಿಗಲ್ಲ. ಹೀಗಾಗಿ ಉತ್ತಮ ರಸ್ತೆ ಹುಡುಕಿಕೊಟ್ಟರೆ ಬಹುಮಾನ ನೀಡುವುದಾಗಿ ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ. ಕೆಲವರು ಗುಂಡಿಗಳಲ್ಲಿ ಸಸಿ ನೆಟ್ಟು ವಿನೂತನವಾಗಿ ಪ್ರತಿಭಟಿಸಿದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥೆ ಕುರಿತು ಹೀಯಾಳಿಸುತ್ತಿದ್ದಾರೆ.
ನಗರದ ಬಾಗಲಕೋಟೆ ರಸ್ತೆ, ಸಿಂದಗಿ ರಸ್ತೆ, ಸೋಲಾಪುರ ರಸ್ತೆ, ಅಥಣಿ ರಸ್ತೆ, ಜಮಖಂಡಿ ರಸ್ತೆ ಸಂಪೂರ್ಣ ಹಾಳಾಗಿವೆ ಎನ್ನುವುದಕ್ಕಿಂತ ರಸ್ತೆಗಳೇ ಕಾಣೆಯಾಗಿವೆ ಎನ್ನಬಹುದು. ಅಥಣಿ ರಸ್ತೆಗೆ ಹೋಗುವಾಗ ಚಾರಣಕ್ಕೆ ಹೊರಟ ಅನುಭವವಾದರೆ ಬಾಗಲಕೋಟೆ ರಸ್ತೆ ಪ್ರಪಾತದಡಿ ಪ್ರಯಾಣ ಬೆಳೆಸಿದ ಅನುಭವ ತರಲಿದೆ. ಇನ್ನು ಸಿಂದಗಿ ರಸ್ತೆ ಕೆಸರು ಗದ್ದೆಯಾಗಿ ಕಂಗೊಳಿಸುತ್ತಿದೆ. ಜಮಖಂಡಿ ರಸ್ತೆಯಂತೂ ತಗ್ಗು ದಿನ್ನೆಗಳಲ್ಲಿ ಕಣ್ಮರೆಯಾಗಿದೆ. ಇನ್ನು ಒಳರಸ್ತೆಗಳ ಸ್ಥಿತಿ ದೇವರೇ ಬಲ್ಲ. ನಗರದಲ್ಲಿ ಒಂದು ಸುತ್ತು ಹೊಡೆದರೆ ನಗರವೋ ನರಕವೋ ಎಂಬ ಉದ್ಘಾರ ಹೊರಬೀಳಲಿಕ್ಕೆ ಸಾಕು.
ಆಶ್ರಮ ರಸ್ತೆ, ಕೇಂದ್ರ ಬಸ್ ನಿಲ್ದಾಣದ ಮುಂದಿನ ರಸ್ತೆ, ಕೆಸಿ ಮಾರುಕಟ್ಟೆ, ತಾಜ್‌ಬಾವಡಿ ಮುಂದಿನ ರಸ್ತೆ, ಕನಕದಾಸ ಬಡಾವಣೆ ರಸ್ತೆ, ಜಲನಗರ ರಸ್ತೆ, ಮನಗೂಳಿ ರಸ್ತೆ, ಗೋಳಗುಮ್ಮಟ ಹಿಂದಿನ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟಿವೆ.
ನಿತ್ಯ ವಾಹನ ಸವಾರರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ಮೇಲೆ ಹಿಡಿಶಾಪ ಹಾಕುತ್ತಲೇ ಪ್ರಯಾಣ ಮುಂದುವರಿಸುತ್ತಿದ್ದಾರೆ. ಆದರೆ, ಆಡಳಿತ ವರ್ಗ ಮಾತ್ರ ಅನುದಾನವಿಲ್ಲದೆ ಕಂಗಾಲಾಗಿದೆ. ಮಹಾನಗರ ಪಾಲಿಕೆ ಮುಂದಿನ ರಸ್ತೆ ಹಾಗೂ ಗಾಂಧಿ ವೃತ್ತದಿಂದ ಎಪಿಎಂಸಿವರೆಗಿನ ರಸ್ತೆ ಗುತ್ತಿಗೆ ನೀಡಿದ್ದರೂ ಕರೊನಾ ನೆಪದಲ್ಲಿ ಕಾಮಗಾರಿ ಇನ್ನೂ ಕುಂಟುತ್ತಲೇ ಸಾಗಿದೆ.
ಅನುದಾನದ ಕೊರತೆಯಿಂದ ಕೆಲ ರಸ್ತೆಗಳ ಸುಧಾರಣೆಗೆ ವಿವಿಧ ಇಲಾಖೆಗಳಿಗೆ ಗುತ್ತಿಗೆ ನೀಡಲಾಗಿದೆ. ಅಥಣಿ ರಸ್ತೆ ನಿರ್ವಹಣೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ನೀಡಲಾಗಿದ್ದು ಕಾಮಗಾರಿ ಆರಂಭವಾಗಬೇಕಿದೆ. ಬಿದನೂರ ಪೆಟ್ರೋಲ್ ಪಂಪ್ ಮುಂದಿನ ರಸ್ತೆ ಪಿಡಬ್ಲುಡಿಗೆ ವಹಿಸಲಾಗಿದೆ. ಸ್ಟೇಶನ್ ರಸ್ತೆಯನ್ನು ಪಾಲಿಕೆಯಿಂದಲೇ ಗುಂಡಿ ಮುಚ್ಚಿಸಲು ಗುತ್ತಿಗೆ ಕರೆಯಲಾಗಿದೆ. ಹೀಗೆ ಅನುದಾನವಿಲ್ಲದ ಕಾರಣ ರಸ್ತೆ ನಿರ್ವಹಣೆ ಜವಾಬ್ದಾರಿಯನ್ನು ಹಂಚುವ ಕಾರ್ಯ ನಡೆದಿದೆ.
ಮಳೆಯಿಂದಾಗಿ ನಗರದ ಒಟ್ಟು 150 ಕಿಮೀ ರಸ್ತೆ ಹಾಳಾಗಿದೆ. ರಸ್ತೆ ಸುಧಾರಣೆಗೆ ಅನುದಾನ ನೀಡುವಂತೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಎನ್‌ಡಿಆರ್‌ಎಫ್ ಅಡಿ 3 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿದೆ. 48 ಲಕ್ಷ ರೂ. ಬರುವ ನಿರೀಕ್ಷೆ ಇದೆ. ನಗರಾಭಿವೃದ್ಧಿ ಇಲಾಖೆಗೆ 10 ಕೋಟಿ ರೂ. ನೆರವು ನೀಡಲು ಪತ್ರ ಬರೆಯಲಾಗಿದೆ. ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ.ಗಳಿಗೆ ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ಆ ಪೈಕಿ 70 ಕೋಟಿ ರೂ.ಗಳಿಗೆ ಅನುಮೋದನೆ ಸಹ ಸಿಕ್ಕಿತ್ತು. ಇದೀಗ ಬಿಜೆಪಿ ಸರ್ಕಾರ ಆ ಹಣವೂ ತಡೆ ಹಿಡಿದಿದೆ. ಈ ಬಗ್ಗೆ ನಗರ ಶಾಸಕ ಯತ್ನಾಳ ತಮ್ಮದೇ ಕಂದಾಯ ಸಚಿವ ಆರ್.ಅಶೋಕ ಎದುರು ಅಸಮಾಧಾನ ತೋಡಿಕೊಂಡಿದ್ದರು.
ಒಟ್ಟಿನಲ್ಲಿ ಗುಮ್ಮಟ ನಗರಿ ಸದ್ಯದ ಮಟ್ಟಿಗೆ ಗುಂಡಿಗಳ ನಗರಿಯಾಗಿ ಮಾರ್ಪಟ್ಟಿದ್ದು ಶಾಸಕ ಬಸವರಾಜ ಯತ್ನಾಳ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.