ವಿಜ್ಞಾನ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಿ

HN 29-5
Published on

ವಿಜಯಪುರ: ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜತೆಗೆ ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ವಿಜ್ಞಾನ ಶಿಕ್ಷಕ ಎಸ್.ವಿ.ಬುರ್ಲಿ ಹೇಳಿದರು.
ನಗರದ ಅಥಣಿ ರಸ್ತೆಯಲ್ಲಿರುವ ಆಕ್ಸ್‌ರ್ಡ್ ಐಐಟಿ ಒಲಂಪಿಯಾಡ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಹಾಗೂ ತಂತ್ರಜ್ಞಾನ ಪರಸ್ಪರ ಪೂರಕವಾಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಎರಡು ಕ್ಷೇತ್ರದ ಬಗ್ಗೆ ಆಳವಾದ ಜ್ಞಾನ ಕೊಡುವ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆ ರೂಪುಗೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಸಂಶೋಧನೆಗೆ ಅಗತ್ಯ ಏನು? ಸಂಶೋಧನೆ ಮಾಡುವ ಮೊದಲು ಸಮಸ್ಯೆಯನ್ನು ಗುರುತಿಸಬೇಕು. ತದನಂತರ ಅವಿರತವಾಗಿ ಶ್ರಮಿಸಿ ಸಾಧನೆಗೈಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಶಿಕ್ಷಕ ಜೆ.ಎಂ.ಇನಾಮದಾರ, ಪ್ರಾಚಾರ್ಯ ಡಿ.ಎಲ್.ಬನಸೋಡೆ ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಶಾಲೆ ಮಕ್ಕಳ ವಿಜ್ಞಾನ ಮಾದರಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net