

ವಿಜಯಪುರ: ಪೆಟ್ರೋಲ್ ಬಾಂಬ್, ಜೀವಂತ ಗುಂಡುಗಳು, ಮಚ್ಚು- ಲಾಂಗ್‌ಗಳು, ಐದು ಬೈಕ್, ಟಿಪ್ಪರ್ ಜಪ್ತಿ ಮತ್ತು ದುಷ್ಕರ್ಮಿಗಳು ಸಂಚು ರೂಪಿಸಿದ ಬೇರೆ ಬೇರೆ ಅಡಗು ತಾಣಗಳ ಪತ್ತೆ ಹಾಗೂ ಎಫ್‌ಎಸ್‌ಎಲ್ ತಂಡದ ಭೇಟಿ, ಐಜಿಪಿಯಿಂದ ಸ್ಥಳ ಪರಿಶೀಲನೆ...’
ಇದಿಷ್ಟು ಮಂಗಳವಾರ ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ನಡೆದ ಪ್ರಮುಖ ವಿದ್ಯಮಾನಗಳು.
ತಾಲೂಕಿನ ಅರಕೇರಿ ಬಳಿಯ ಕನ್ನಾಳ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ನಡೆದ ದಾಳಿಯ ಸ್ಥಳಕ್ಕೆ ಬೆಳಗಾವಿಯ ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೂವರು ಅಧಿಕಾರಿಗಳಿದ್ದ ತಂಡಕ್ಕೆ ಎಸ್‌ಪಿ ಅನುಪಮ್ ಅಗರವಾಲ್ ಸಾಥ್ ನೀಡಿದರು. ಸ್ಥಳದಲ್ಲಿ ಕೆಲವು ಜೀವಂತ ಗುಂಡು ಸಿಕ್ಕಿದ್ದು ಇನ್ನುಳಿದಂತೆ ಕೆಲ ಸಾಕ್ಷೃಗಳನ್ನು ಕಲೆ ಹಾಕಲಾಯಿತು.
ಒಟ್ಟು ಐದು ಬೈಕ್, ಟಿಪ್ಪರ್, ಮಚ್ಚು- ಲಾಂಗ್‌ಗಳು ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಯಿತು. ಅಲ್ಲದೆ, ಅಲ್ಲಲ್ಲಿ ಅಡಗಿ ಕುಳಿತು ಸಂಚು ರೂಪಿಸಿದ ಕುರುಹುಗಳು ಸಹ ಅಧಿಕಾರಿಗಳ ಗಮನಕ್ಕೆ ಬಂತು. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು. ಗಡಿ ಭಾಗದಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದ್ದು, ವಾಹನಗಳ ತಪಾಸಣೆ ಸಹ ಜೋರಾಗಿತ್ತು.
ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ವಾರದೊಳಗೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದರು.
ಈಗಾಗಲೇ ಸಾಕಷ್ಟು ಮಾಹಿತಿ ಕಲೆ ಹಾಕಲಾಗಿದೆ. ಐದು ಬೈಕ್, ಒಂದು ಟಿಪ್ಪರ್, ಪೆಟ್ರೋಲ್ ಬಾಂಬ್, ಮಚ್ಚು ಜಪ್ತಿ ಮಾಡಿಕೊಳ್ಳಲಾಗಿದೆ. ಇನ್ನು ಶೂಟೌಟ್‌ಗೂ ಮುನ್ನ ದುಷ್ಕರ್ಮಿಗಳು ಎಲ್ಲ ರೀತಿಯ ತಯಾರಿ ಮಾಡಿಕೊಂಡು ಬಂದಿದ್ದು, ಒಂದು ಸಂಚು ತಪ್ಪಿದರೆ ಮತ್ತೊಂದು ಸಫಲವಾಗಬೇಕೆಂದು ಬೇರೆ ಬೇರೆ ಸ್ಥಳ ಗುರುತಿಸಿದ್ದು, ದಾಳಿ ಬಳಿಕ ರಸ್ತೆ ಮಾರ್ಗವಾಗಿ ಬೇರೆ ಬೇರೆ ಕಡೆ ತಪ್ಪಿಸಿಕೊಂಡಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದೆಲ್ಲವೂ ಗೊತ್ತಾಗಿದೆ. ಗ್ಯಾಂಗ್ ವಾರ್‌ನಲ್ಲಿ 15-20 ಜನ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದರು.
ವಿಜಯಪುರ- ಬಾಗಲಕೋಟೆಯ 1500ಕ್ಕೂ ಅಧಿಕ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಕಲಬುರಗಿ ಮತ್ತು ವಿಜಯಪುರ ಭಾಗದಲ್ಲಿ ಹಳೇ ಗ್ಯಾಂಗ್ ಮತ್ತೆ ಸಕ್ರಿಯಗೊಂಡಿದೆ. ಹೀಗಾಗಿ ಹಳೇ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದರು.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸಾಹುಕಾರ ಕಾರು ಚಾಲಕ ಲಕ್ಷ್ಮಣ ದಿಂಡೋರೆ (27) ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಲಕ್ಷ್ಮಣಗೆ ಒಂದು ಗುಂಡು ತಗುಲಿತ್ತಲ್ಲದೆ ಕಾಲು ತುಂಡಾಗಿತ್ತು. ಹೀಗಾಗಿ ಅತಿಯಾದ ರಕ್ತಸ್ರಾವವಾಗಿ ಅಸುನೀಗಿದ್ದಾಗಿ ಪೊಲೀಸರು ದೃಢಪಡಿಸಿದ್ದಾರೆ.
ಮಹಾದೇವ ಸಾಹುಕಾರ ದೇಹದಲ್ಲಿದ್ದ ಗುಂಡುಗಳನ್ನು ತೆಗೆಯಲಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ಸಾಹುಕಾರನನ್ನು ಹೈದ್ರಾಬಾದ್‌ಗೆ ಶಿಫ್ಟ್ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಅವರಿಗೆ ಬಿಎಲ್‌ಡಿಇಯಲ್ಲೇ ಚಿಕಿತ್ಸೆ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.