

ವಿಜಯಪುರ: ಸ್ವಾಮಿತ್ವ ಯೋಜನೆಯಡಿ ವಿವಿಧ ಸೇವೆಗಳಿಗೆ ಪರವಾನಗಿಯುಕ್ತ ಭೂಮಾಪಕರನ್ನು ನಿಯೋಜಿಸಲಾಗಿದ್ದು, ಕೂಡಲೇ ನಿಯೋಜನೆ ರದ್ದುಗೊಳಿಸಲು ಆಗ್ರಹಿಸಿ ಜಿಲ್ಲೆಯ ವಿವಿಧ ಭಾಗಗಳ ಭೂಮಾಪಕರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಎಲ್ಲ ತಾಲೂಕಿನ ಭೂಮಾಪಕರನ್ನು ಸ್ವಾಮಿತ್ವ ಯೋಜನೆಯಡಿ ಸೇವೆಗೆ ನಿಯೋಜಿಸಿದ್ದಾರೆ. ಆದರೆ, ಈವರೆಗೂ ಆ ಬಗ್ಗೆ ಅವರಿಗೆ ತರಬೇತಿಯಾಗಲಿ, ಸಂಬಂಧಿಸಿದ ಸಲಕರಣೆಯಾಗಲಿ ನೀಡಿಲ್ಲ. ಭೂಮಾಪಕರಿಗೆ ಆ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ. ಹೀಗಾಗಿ ನಿಯೋಜನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಪರವಾನಗಿ ಭೂಮಾಪಕರು ಕೇವಲ ನೋಂದಣಿ ಪೂರ್ವ ನಕಾಶೆ ತಯಾರಿಸಲು ಮಾತ್ರ ಇದ್ದಾರೆ. ಯಾವುದೇ ಸರ್ಕಾರಿ ಆಸ್ತಿ, ಅವಶ್ಯವಿಲ್ಲದ ಸರ್ಕಾರಿ ಜಮೀನನ್ನು ಅಳತೆ ಮಾಡಬಾರದೆಂಬ ನಿಯಮ ಕೂಡ ಇದೆ. ಭೂಮಾಪಕರು 11 ಇ ನಕಾಶೆ, ಅಲಿನೇಷನ್ ನಕಾಶೆ ಮತ್ತು ತಾತ್ಕಾಲಿಕ ಫೋಡಿ ನಕಾಶೆಗಳನ್ನು ತಯಾರಿಸುವುದು ಇರುತ್ತದೆ. ಅಲ್ಲದೆ, ಸ್ವಾಮಿತ್ವದ ಬಗ್ಗೆ ಭೂಮಾಪಕರಿಗೆ ಯಾವುದೇ ಸೇವಾಭದ್ರತೆ ಸಹ ನೀಡದೆ ನಿಯೋಜಿಸಿದ್ದು ಖಂಡನೀಯ ಎಂದರು.
ಭೂಮಾಪಕರಾದ ರಾಜಶೇಖರ ಸಜ್ಜನ, ಅನಿಲ ಕುಲಕರ್ಣಿ, ಎಲ್.ಬಿ. ಬಿರಾದಾರ, ನವೀನ ರೊಟ್ಟಿ, ಎಸ್.ಬಸವರಾಜ, ಜಾನಪ್ಪ ಬಡಿಗೇರ, ಮಹೇಶ ಕುರವಿನಶೆಟ್ಟಿ ಮತ್ತಿತರರಿದ್ದರು.