

ವಿಜಯಪುರ: ಕಡುಬಡವರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿರುವ ಜನೌಷಧ ಕೇಂದ್ರದ ಉಪಯುಕ್ತತೆ ಸರ್ವರಿಗೂ ಲಭಿಸಲಿ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಶಿಸಿದರು.
ನಗರದ ಆಶ್ರಮ ರಸ್ತೆಯಲ್ಲಿರುವ ಜನೌಷಧ ಕೇಂದ್ರದಲ್ಲಿ ಶನಿವಾರ ‘ಜನೌಷಧ ದಿನ’ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆ ಪೈಕಿ ಜನೌಷಧ ಕೇಂದ್ರ ಸ್ಥಾಪನೆ ಅನೇಕ ಬಡವರಿಗೆ ಸಂಜೀವಿನಿಯಾಗಿದೆ ಎಂದರು.
ಸರ್ಕಾರದ ಯೋಜನೆಗಳು ಸಕಾಲಕ್ಕೆ ಜನರಿಗೆ ತಲುಪಬೇಕು. ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ ಸರ್ಕಾರದ ಯೋಜನೆ ಸದುಪಯೋಗವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜನೌಷಧ ದಿನ ಆಚರಣೆ ಮೂಲಕ ಯೋಜನೆ ಮಹತ್ವ ಸಾರಲಾಗುತ್ತಿದೆ ಎಂದರು.
ಮುಖಂಡ ಉಮೇಶ ವಂದಾಲ ಮಾತನಾಡಿ, ದೇಶ ರಕ್ಷಕ ಪಡೆ ಕಟ್ಟಿಕೊಂಡು ರಾಜು ಜನಗೊಂಡ ಹಾಗೂ ಪ್ರೀತಿ ಪಾಟೀಲ ಎಂಬುವರು ಬಡವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದು ಅವರ ಕಾರ್ಯ ಶ್ಲಾಘನೀಯ ಎಂದರು.
ದೇಶ ರಕ್ಷಕ ಪಡೆ ಸಂಸ್ಥಾಪಕ ರೋಹನ ಆಪ್ಟೆ, ಪ್ರೇಮ ಕಲಕುಟಗಿ, ಜ್ಯೋತಿ ಚವಾಣ್, ರಾಜು ಜನಗೊಂಡ, ಅನಿಲಕುಮಾರ ಅಂಕದ, ಶಾಂತಗೌಡ ಪಾಟೀಲ, ವಿನೋದ ರಾಠೋಡ, ಸಚಿನ ಸವನಳ್ಳಿ, ಸಮೀರ ಕುಲಕರ್ಣಿ, ಪವನ ಸವನಳ್ಳಿ ಮತ್ತಿತರರಿದ್ದರು.