ಸೂಕ್ತ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ

VMS 1-6
Published on

ವಿಜಯಪುರ: ಜಾತ್ರೆಯಲ್ಲಿ ಅವಘಡ ಸಂಭವಿಸಿ ಮೃತಪಟ್ಟ ಜಾನುವಾರಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಹಾಗೂ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಗರ ಶಾಸಕ ಹಾಗೂ ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಭವನದಲ್ಲಿ ಮಕರ ಸಂಕ್ರಮಣ ನಿಮಿತ್ತ ಜ.10 ರಿಂದ 18 ರವರೆಗೆ ತೊರವಿ ಗ್ರಾಮದಲ್ಲಿ ನಡೆಯಲಿರುವ ಸಿದ್ಧೇಶ್ವರ ಜಾನುವಾರು ಜಾತ್ರೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾತ್ರೆಯಲ್ಲಿ ಆರೋಗ್ಯ ದೃಷ್ಟಿಯಿಂದ ಆಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರಿನ ಪರೀಕ್ಷೆ ಮಾಡಿಸುವಂತೆ, ರಾತ್ರಿಹೊತ್ತು ವೈದ್ಯರನ್ನು ನೇಮಿಸಿ, ವೈದ್ಯಕೀಯ ಸೇವೆ ಕಲ್ಪಿಸಬೇಕು. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ನೀಡುವ ವ್ಯವಸ್ಥೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆಯಿಂದ ನಗರದ ಸ್ವಚ್ಛತೆಗೆ, ವಾಟರ್ ಬೋರ್ಡ್‌ನಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡುವಂತೆ ತಿಳಿಸಿದರು. ರೈತರಿಗೆ ತೆರಿಗೆ ಇಲಾಖೆ ಯೋಜನೆಗಳನ್ನು ಪರಿಚಯಿಸುವ ಕರಪತ್ರ ಹಾಗೂ ಹೊಸ ತಂತ್ರಜ್ಞಾನದ ಪರಿಚಯ ನೀಡಬೇಕೆಂದು ಆದೇಶಿಸಿದರು.
ವ್ಯವಸ್ಥಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಇಲಾಖೆಗೆ, ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಇಲಾಖೆಗೆ ಸೂಚಿಸಿದರು. ಪೊಲೀಸ್ ಇಲಾಖೆಯಿಂದ ಸಂಚಾರ ವ್ಯವಸ್ಥೆ ಹಾಗೂ ರೈತರಿಗೆ ರಾತ್ರಿ ಹೊತ್ತು ಹೆಚ್ಚಿನ ಭದ್ರತೆ ಒದಗಿಸುವಂತೆ, ಸರ್ಕಾರ ಯೋಜನೆಗಳನ್ನು ಪ್ರಚಾರ ಮಾಡಲು ಮಳಿಗೆಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಎಪಿಎಂಸಿ ಜಂಟಿ ನಿರ್ದೇಶಕ ಆರ್.ಎಂ. ಕುಮಾರಸ್ವಾಮಿ, ಅಧ್ಯಕ್ಷ ಸುರೇಶ ಬಿರಾದಾರ, ಉಪಾಧ್ಯಕ್ಷ ಸುರೇಶ ತಳವಾರ, ದ್ರಾಕ್ಷಿ ಬೆಳೆಗಾರ ಎಂ.ಎಸ್. ರುದ್ರಗೌಡರು, ಎಚ್.ಆರ್. ಉಟಗಿ, ಸದಾಶಿವ ಗುಡ್ಡೋಡಗಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಎಪಿಎಂಸಿ ಪೊಲೀಸ್ ಠಾಣೆ ಪಿಎಸ್‌ಐ ಸೋಮೇಶ ಗೆಜ್ಜಿ, ಕೃಷಿ, ತೋಟಗಾರಿಕೆ, ಸಾರಿಗೆ, ಹೆಸ್ಕಾಂ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net