ಜನಾಕರ್ಷಿಸಿದ ಜಾನಪದ ನೃತ್ಯ

VJP NEWS 9-3
Published on

ಪರಶುರಾಮ ಭಾಸಗಿ
ವಿಜಯಪುರ:
‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ ಹಳ್ಳ ಕೊಳ್ಳಾ ತಿರುಗಾಡಿ ಬಂದೆ, ಕಾರ ಮಳೆಯೋ ಕಪ್ಪತ್ತ ಮಳೆಯು ಸುರಿ ಸುರಿಯೋ ಮಳೆರಾಯ…..ಸುರಿ ಸುರಿಯೋ ಮಳೆರಾಯ’

ಬರದ ಜಿಲ್ಲೆ ಎಂದೇ ಹೆಸರಾದ ವಿಜಯಪುರ ಐತಿಹಾಸಿಕ ಆನಂದ ಮಹಲ್ ಸಾಂಸ್ಕೃತಿಕ ವೇದಿಕೆಯಲ್ಲಿ ಜಾನಪದ ಕಲಾವಿದರು ಇಂಥದ್ದೊಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ನೆರೆದ ಜನರ ಎದೆಯಲ್ಲಿ ಮಳೆಯ ಸಿಂಚನವಾದಂತಿತ್ತು.

ಹೌದು, ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗ ಮಟ್ಟದ ಯುವಜನ ಮೇಳದ ಎರಡನೇ ದಿನ ಭಾನುವಾರದಂದು ವಿವಿಧ ಜಾನಪದ ನೃತ್ಯ ಪ್ರಕಾರಗಳಲ್ಲಿ ಗುರ್ಜಿ ಹಾಡು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.

ಬೆಳಗಾವಿಯ ಕವಿರತ್ನ ಕಾಳಿದಾಸ ಕ್ರೀಡೆ ಮತ್ತು ಆರಾಧನ ಸಂಘದವರು ಪ್ರಸ್ತುತ ಪಡಿಸಿದ ಗುರ್ಜಿ ಹಾಡು ಜನಮನ ಸೂರೆಗೊಂಡಿತು. ಸಾಂಪ್ರದಾಯಿಕ ಉಡುಗೆಯಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತ ವೇದಿಕೆಗೆ ಆಗಮಿಸಿದ ಕಲಾವಿದರು ಐದು ನಿಮಿಷಗಳ ಕಾಲ ಮಳೆಯ ಅನುಭವ ತಂದರು.

ನೃತ್ಯ-ಹಾಡಿನ ವೈಭವ
ಕಾರವಾರ ಜಿಲ್ಲೆಯ ಸೋಂದಾದ ರಾಜರಾಜೇಶ್ವರಿ ತಂಡದವರು ಕಂಸಾಳೆ ನೃತ್ಯದ ಮೂಲಕ ಜಾನಪದ ನಿರ್ಣಾಯಕರ ಮೆಚ್ಚುಗೆಗೆ ಪಾತ್ರವಾದರು. ಉೇ ಮಹಾದೇಶ್ವರ ಎನ್ನುತ್ತ ತಾಳ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ಮಲೆ ಮಹಾದೇಶ್ವರನೇ ಕಣ್ಮುಂದೆ ಬಂದಂತಿತ್ತು. ಬಾಗಲಕೋಟೆಯ ಅಲ್ಪಸಂಖ್ಯಾತ ನವೋದಯ ವಸತಿ ನಿಲಯದ ವಿದ್ಯಾರ್ಥಿಗಳು ‘ನಮ್ಮ ಹಳ್ಳಿ ನಮಗ ಪಾಡ…..ಯಾತಕವ್ವ ಹುಬ್ಬಳ್ಳಿ ಧಾರವಾಡ’ ಎಂಬ ಹಾಡಿನ ಮೂಲಕ ಹಳ್ಳಿ ಮತ್ತು ಪಟ್ಟಣದ ನಡುವಿನ ವ್ಯತ್ಯಾಸ ಸಾದರಪಡಿಸಿದರು. ಚಿಕ್ಕೋಡಿ ಬಿಇಡಿ ಕಾಲೇಜಿನ ವಿದ್ಯಾರ್ಥಿನಿಯರ ‘ಏನ್ ಕೊಡ ಏನ್ ಕೊಡ ಹುಬ್ಬಳ್ಳಿ ಮಠ ಎಂಥಾ ಚೆಂದುಳ್ಳ ಕೊಡವಾ’ ನೃತ್ಯ ಮೆಚ್ಚುಗೆ ಗಳಿಸಿತು.

ಕಾರವಾರದ ಶಿರಸಿಯ ದಾಕ್ಷಾಯಣಿ ಯುವತಿ ಮಂಡಳದವರು ಇಳಕಲ್ಲ ಸೀರೆಯುಟ್ಟು ‘ಹಸರಿ ಕಡ್ಡಿಯ ಸೀರೆ ತೋಪು ಮುಸುಕ ಮೇಲೆ ಮಾಡಿ….ಬಿಸಿಲಿಗೆ ಬೆನ್ನು ಮಾಡಿ ನಡೆಯಂಗಾಗೇತಿ’ ಎಂದು ಹಾಡುತ್ತಿದ್ದರೆ ಜಾನಪದ ನಾಡಿನ ಹೆಣ್ಣಿನ ಬಯಕೆಗಳು ಹೇಗಿರುತ್ತವೆ ಎಂಬುದು ಪ್ರೇಕ್ಷಕರ ಕಣ್ಮುಂದೆ ಚಿತ್ರಕಟ್ಟುತ್ತಿತ್ತು. ಬೆಳಗಾವಿ ಜಿಲ್ಲೆ ಲಕ್ಷ್ಮಿ ದೇವಿ ಕಲಾತಂಡದವರ ‘ಪಂಚಮಿ ಹಬ್ಬ ಬಂತು ಅಣ್ಣಾ ಯಾಕ ಬರಲಿಲ್ಲ ಕರಿಯಾಕ’ ಎಂಬ ಹಾಡು ಮತ್ತು ವಿಜಯಪುರ ಕಲಾರಂಗ ತಂಡದ ‘ಮಾಯದಂತ ಮಳೆ ಬಂತಣ್ಣ’ ಎಂಬ ಹಾಡುಗಳು ಜಾನಪದ ಲೋಕವನ್ನೇ ಸೃಷ್ಟಿಸಿದವು. ಬಾಗಲಕೋಟೆ ಜಿಲ್ಲೆ ಹುನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ಯಾವ ಸೀಮೆ ಗಂಡು ಇವನು ರಂಗೀಲಾಲ’ ಎಂದು ಹಾಡುತ್ತಿದ್ದರೆ ಕೆಲವರು ಕುಳಿತಲ್ಲೇ ನೃತ್ಯ ಮಾಡುತ್ತಿದ್ದರು.

ಸಣ್ಣಾಟ-ಡೊಳ್ಳು ಕುಣಿತ ಇತ್ಯಾದಿ
ಬೆಳಗಾವಿ ಜಿಲ್ಲೆ ಓಬಳಾಪುರದ ಬೀರಲಿಂಗೇಶ್ವರ ಕಲಾತಂಡ, ಗದಗ ಜಿಲ್ಲೆಯ ಇಟಗಿಯ ಬೀರಲಿಂಗೇಶ್ವರ ಕಲಾ ತಂಡದವರು ಪ್ರಸ್ತುತ ಪಡಿಸಿದ ಡೊಳ್ಳಿನ ನೃತ್ಯ ಮೇಳದ ವೈಭವ ಹೆಚ್ಚಿಸಿತು. ಕರಿಯ ಕಂಬಳಿ ಹೊದ್ದು, ಚರ್ಮದ ಹೊದಿಕೆ ತೊಟ್ಟು ಭಂಡಾರ ಬಳಿದುಕೊಂಡು ಡೊಳ್ಳು ಬಾರಿಸುತ್ತಿದ್ದರೆ ಶಿವನ ಒಡ್ಡೋಲಗ ನೆನಪಿಸುವಂತಿತ್ತು.

ಶನಿವಾರ ರಾತ್ರಿ ಪ್ರದರ್ಶನಗೊಂಡ ಬಾಗಲಕೋಟೆ ಜಮಖಂಡಿ ತಾಲೂಕಿನ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾರವಾರದ ಸಿದ್ದಾಪುರದ ಚೌಡೇಶ್ವರಿ ಯುವಕ ಸಂಘದವರು ಪ್ರದರ್ಶಿಸಿದ ‘ಸಂಗ್ಯಾಬಾಳ್ಯಾ’ ಸಣ್ಣಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಬೆಳಗಾವಿಯ ಮೂಡಲಗಿ ವೀರಭದ್ರೇಶ್ವರ ಕಲಾತಂಡದವರ ‘ವೀರಗಾಸೆ’ ಜಾನಪದದ ವೈಶಿಷ್ಟೃತೆಯನ್ನು ಎತ್ತಿ ಹಿಡಿಯಿತು. ಗೀಗಿ ಪದ, ಲಾವಣಿ ಪದ, ಜಾನಪದ ಹಾಡುಗಳು ಗ್ರಾಮೀಣ ಸೊಗಡನ್ನು ನೆನಪಿಸಿದವು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net