

ವಿಜಯಪುರ: ದೇಶದಲ್ಲಿಯೇ ಅತ್ಯುತ್ತಮ ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯ ಒಣದ್ರಾಕ್ಷಿ ಆನ್‌ಲೈನ್ ವಹಿವಾಟು ಕೆಲವು ಪಟ್ಟಬದ್ಧ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿ ನಲುಗಿ ಹೋಗಿದ್ದು, ದಶಕದ ಹಿಂದೆ ನಿರ್ಮಿತವಾದ ಕಟ್ಟಡ ಬಿಕೋ ಎನ್ನುತ್ತಿದೆ.
ನಗರದ ಅಂಬೇಡ್ಕರ್ ಕ್ರೀಡಾಂಗಣ ಸಮೀಪ ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಎಸ್.ಕೆ. ಬೆಳ್ಳುಬ್ಬಿ ಅವರು ತೋಟಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಗೋಲಾಕಾರವಾಗಿ ನಿರ್ಮಿಸಿದ ಸುಂದರ ಕಟ್ಟಡ ಸ್ಥಳೀಯರ ರಾಜಕಾರಣಿಗಳ ನಿರಾಸಕ್ತಿಯಿಂದಾಗಿ ಸಮರ್ಪಕ ಚಾಲನೆಯನ್ನೇ ಪಡೆಯಲಿಲ್ಲ. ಐದು ವರ್ಷಗಳ ಹಿಂದೆ ಕೇವಲ ಎರಡು ಬಾರಿಯಷ್ಟೇ ಆನ್‌ಲೈನ್ ವಹಿವಾಟು ನಡೆಸಲಾಗಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಅಭಯಕುಮಾರ ನಾಂದ್ರೇಕರ.
ಹೀಗಾಗಿ ಆನ್‌ಲೈನ್ ಮಾರುಕಟ್ಟೆ ಕಟ್ಟಡ ಹಾಗೂ ಅಲ್ಲಿರುವ ಪೀಠೋಪಕರಣಗಳು ಹಾಳಾಗಿದೆ. ಅದರಲ್ಲೂ ಇ-ವಹಿವಾಟು ನಡೆಸಲು ಪ್ರಮುಖವಾದ ಗಣಕ ಯಂತ್ರಗಳು ಹಾಳಾಗಿದೆ. ಈ ಬಗ್ಗೆ ಎಪಿಎಂಸಿಯ ಕಾರ್ಯದರ್ಶಿಗಳೊಂದಿಗೂ ಸಂಘದ ಅಧ್ಯಕ್ಷರು ಚರ್ಚೆ ನಡೆಸಿದ್ದು ಅವರಿನ್ನೂ ಕೇವಲ ಆಶ್ವಾಸನೆ ಕೊಡುವುದರಲ್ಲೇ ಇದ್ದಾರೆ.
ವಿಜಯಪುರದಲ್ಲಿನ ಬಿಸಿಲು, ಹವಾಮಾನ ಹಾಗೂ ವಾತಾವರಣ ದ್ರಾಕ್ಷಿ ಬೆಳೆಯಲು ಪೂರಕವಾಗಿದ್ದು, ಇಲ್ಲಿ ನಂಬರ್ ಒನ್ ಒಣದ್ರಾಕ್ಷಿ ತಯಾರಾಗುತ್ತದೆಯಲ್ಲದೇ, ವಿದೇಶಗಳಿಗೂ ರಫ್ತಾಗುತ್ತದೆ. ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ದ್ರಾಕ್ಷಿ ಬೆಳೆಗಾರರಿದ್ದು, ಸುಮಾರು 15 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಸರಿಸುಮಾರು ವಾರ್ಷಿಕ ಎರಡು ಸಾವಿರ ಕೋಟಿ ರೂ. ನಷ್ಟು ವಹಿವಾಟು ನಡೆಯುತ್ತದೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕೇವಲ ಬೆರಳೆಣಿಕೆಯಷ್ಟು ಏಜೆಂಟರು ರೈತರಿಂದ ಕಡಿಮೆ ಬೆಲೆಗೆ ಒಣದ್ರಾಕ್ಷಿ ಖರೀದಿಸಿ, ನಂತರ ವಿವಿಧೆಡೆ ವಹಿವಾಟು ನಡೆಸುವ ಮೂಲಕ ಶೇ. 40ರಷ್ಟು ಹೆಚ್ಚಿನ ಲಾಭಾಂಶ ಪಡೆಯುತ್ತಾರೆ ಎಂಬ ಅಂದಾಜಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರಾದ ಕೆ.ಎಚ್. ಭೂಮರೆಡ್ಡಿ.
ಹೀಗಾಗಿಯೇ ಒಣ ದ್ರಾಕ್ಷಿ ಮಾರಾಟಕ್ಕೆ ಆನ್‌ಲೈನ್ ವ್ಯವಸ್ಥೆ ಮಾಡಬೇಕು ಎಂದು ನಿರ್ಧರಿಸಿ ನಗರದ ಕೇಂದ್ರ ಪ್ರದೇಶದಲ್ಲಿಯೇ ಆನ್‌ಲೈನ್ ಮಾರಾಟಕ್ಕೆ ಸೂಕ್ತವಾದ ಕಟ್ಟಡ, ವ್ಯವಸ್ಥೆ ಮಾಡಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಆನ್‌ಲೈನ್ ವಹಿವಾಟಿಗೆ ನಿರಂತರ ಚಾಲನೆಯೇ ಸಿಗದಿರುವಂತೆ ಮಾಡಿದ್ದಾರೆ. ಇದರ ಪರಿಣಾಮ ಕಷ್ಟ ಪಟ್ಟು ದ್ರಾಕ್ಷಿ ಬೆಳೆದ ಬೆಳೆಗಾರರ ಪಾಲಿಗೆ ಸಿಹಿಯಾದ ಒಣದ್ರಾಕ್ಷಿ ‘ಹುಳಿ’ಯಾಗಿರುವುದು ನಗ್ನಸತ್ಯ.
ಅತೀ ಶೀಘ್ರದಲ್ಲಿ ಒಣದ್ರಾಕ್ಷಿ ಆನ್‌ಲೈನ್ ಮಾರ್ಕೆಟ್ ಆರಂಭಿಸಬೇಕು ಹಾಗೂ ವಿಜಯಪುರದಲ್ಲೇ ದ್ರಾಕ್ಷಿ ನಿಗಮ ಮಂಡಳಿ ನಿರ್ಮಿಸಬೇಕು ಎಂದು ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ. ದಶಕದಿಂದ ತುಕ್ಕು ಹಿಡಿದ ಮಾರುಕಟ್ಟೆಗೆ ಚಾಲನೆ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ದ್ರಾಕ್ಷಿ ಮಾರಾಟಗಾರರನ್ನು ಲಾಭಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಈಗಾಗಲೇ ಹತ್ತು ವರ್ಷಗಳಿಂದ ತುಕ್ಕು ಹಿಡಿದಿರುವ ಒಣ ದ್ರಾಕ್ಷಿ ಆನ್‌ಲೈನ್ ಮಾರುಕಟ್ಟೆಯನ್ನು ಮುಂದಿನ ಒಂದು ತಿಂಗಳೊಳಗಾಗಿಯೇ ಆರಂಭಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಭಾಗದ ದ್ರಾಕ್ಷಿ ಬೆಳೆಗಾರರ ಹಿತವನ್ನು ಕಾಪಾಡಲಾಗುವುದು.
ಬಸನಗೌಡ ಪಾಟೀಲ್ ಯತ್ನಾಳ, ವಿಜಯಪುರ ನಗರ ಶಾಸಕರು
ಕಷ್ಟಪಟ್ಟು ಬೆಳೆದ ದ್ರಾಕ್ಷಿಗೆ ವಿದೇಶಿ ಮಾರುಕಟ್ಟೆಯಲ್ಲೂ ಅಧಿಕ ಬೇಡಿಕೆಯಿದ್ದು, ಆನ್‌ಲೈನ್ ಮೂಲಕ ಮಾರಾಟವಾದರೇ ಪಾರದರ್ಶಕವಾಗಿ ವಹಿವಾಟು ನಡೆದು ರೈತರಿಗೂ ಉತ್ತಮ ಬೆಲೆ ದೊರಕುತ್ತದೆ. ಸ್ಥಳೀಯ ವ್ಯಾಪಾರಿಗಳ ಕಪಿಮುಷ್ಠಿಯಿಂದ ಹೊರಬರಲು ಅನುಕೂಲವಾಗುತ್ತದೆ. ಶೀಘ್ರವೇ ಆನ್‌ಲೈನ್ ಮಾರುಕಟ್ಟೆ ಆಗಬೇಕಿದೆ.
ಹೆಚ್.ಆರ್. ಉಟಗಿ, ದ್ರಾಕ್ಷಿ ಬೆಳೆಗಾರರು
ದ್ರಾಕ್ಷಿ ಬೆಳೆಗಾರರ ಹಿತವನ್ನು ಕಾಪಾಡಲೆಂದೇ ದ್ರಾಕ್ಷಿ ಬೆಳೆಗಾರರ ಸಂಘ ಸ್ಥಾಪನೆಯಾಗಿದ್ದು, ಅತಿ ಶೀಘ್ರದಲ್ಲಿಯೇ ಒಣ ದ್ರಾಕ್ಷಿ ಮಾರಾಟವನ್ನು ಆನ್‌ಲೈನ್‌ನಲ್ಲಿ ಮಾಡುವಂತೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತದೆ.
ಅಭಯಕುಮಾರ ನಾಂದ್ರೇಕರ, ಅಧ್ಯಕ್ಷರು, ದ್ರಾಕ್ಷಿ ಬೆಳೆಗಾರರ ಸಂಘ