ಸರ್ಕಾರದ ನೀತಿ ಖಂಡಿಸಿ ರಸ್ತೆ ತಡೆ

HN 5-3
Published on

ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿ ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಗುರುವಾರ ರೈತರು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಇಡೀ ಜಗತ್ತನ್ನು ಕರೊನಾ ಅವರಿಸಿದೆ. ಲಕ್ಷಾಂತರ ಜನರ ಸಾವು ನೋವುಗಳಾಗಿವೆ. ದಿನೇ ದಿನೆ ರೋಗವೂ ವ್ಯಾಪಕವಾಗುತ್ತಿದೆ. ಅದನ್ನು ನಿಯಂತ್ರಣ ಮಾಡಲು ಸರ್ಕಾರಗಳು ಘೋಷಣೆ ಮಾಡಿರುವ ಲಾಕ್‌ಡೌನ್ ಮತ್ತಿತರ ಕ್ರಮಗಳಿಂದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಕೃಷಿ ರಂಗ ಸಂಕಷ್ಟ ಅನುಭವಿಸುತ್ತಿದೆ. ಹಸಿವು, ನಿರುದ್ಯೋಗ, ಆರ್ಥಿಕ ದಿವಾಳಿ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜಕಾಯ್ದೆ ತಿದ್ದುಪಡಿ- 2020 ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಕೆಎಸ್ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ರೋಗವನ್ನು ನಿಯಂತ್ರಿಸಲು ಸಂಪೂರ್ಣ ವಿಲವಾಗಿವೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು, ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ, ಸಂಸತ್‌ನಲ್ಲಿ ಹಾಗೂ ವಿಧಾನ ಮಂಡಲಗಳಲ್ಲಿ ಯಾವುದೇ ಚರ್ಚೆ ನಡೆಸದೆ ಎಲ್ಲವನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹವಣಿಸುತ್ತಿವೆ. ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಿರುವ ಸರ್ಕಾರಗಳು, ದೇಶದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರನ್ನು ಗುಲಾಮರನ್ನಾಗಿ ಮಾಡಲು ಕಾಯ್ದೆಗಳನ್ನು ತಿದ್ದುಪಡ್ಡಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ಅಣ್ಣಾರಾಯ ಈಳಗೇರ, ಪ್ರಕಾಶ ಹಿಟ್ನಳ್ಳಿ, ಬಾಳು ಜೇವೂರ, ಸುರೇಖಾ ರಜಪೂತ, ತಿಪ್ಪರಾಯ ಹತ್ತರಕಿ, ಪ್ರಕಾಶ ಕಿಲಾರೆ, ವಿಶ್ವನಾಥ ನರಳೆ, ಆಕಾಶ ರಾಮತೀರ್ಥ, ಸಿದ್ರಾಮ ಬಂಗಾರಿ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net