ತಾರುಣ್ಯದ ದಿನಗಳು ಬದುಕಿಗೆ ದಾರಿದೀಪ

HN 18-3
Published on

ವಿಜಯಪುರ: ತಾರುಣ್ಯದ ದಿನಗಳು ಭವಿಷ್ಯದ ಬದುಕಿಗೆ ದಾರಿದೀಪವಾಗಬೇಕು ಎಂದು ಅಕ್ಕಮಹಾದೇವಿ ವಿವಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಹದಿಹರಿಯದವರ (ಕಿಶೋರಾವಸ್ಥೆ) ಮೇಲೆ ಅಭಿವೃದ್ಧಿ ವರದಿಗಾರಿಕೆ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿಶೋರಾವಸ್ಥೆಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡದೆ ನಮ್ಮ ನಮ್ಮಲ್ಲಿಯೇ ಹೆಚ್ಚು ಅಂತರವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಕಿಶೋರಾವಸ್ಥೆಯಲ್ಲಾಗುವ ಬದಲಾವಣೆಗಳು ಹಾಗೂ ಹದಿಹರಿಯದವರ ತೊಂದರೆಗಳನ್ನು ಸಂಕೋಚವಿಲ್ಲದೆ ಚರ್ಚಿಸುವ ವಾತಾವರಣ ನಿರ್ಮಾಣವಾಗಬೇಕಿದೆ. ನಾವೆಲ್ಲರೂ ಸೇರಿ ಈ ವಿಚಾರಕ್ಕೆ ಅರ್ಥ ಒದಗಿಸಬೇಕಿದೆ ಎಂದು ಹೇಳಿದರು.
ಸಂವಹನ ತಜ್ಞ ಪ್ರೊಸನ್ ಸೇನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹದಿಹರಿಯದವರನ್ನು ರಾಷ್ಟ್ರ ನಿರ್ಮಾಣದತ್ತ ಸಾಗುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಶಕ್ತಿಯೇ ನಮ್ಮ ದೇಶದ ಸಂಪತ್ತು. ಅವರನ್ನು ಸರಿದಾರಿಯತ್ತ ಸಾಗುವಂತೆ ಮಾಡಿ ಅವರನ್ನು ನಮ್ಮ ರಾಷ್ಟ್ರದ ಅಭಿವೃದ್ಧಿಗಾಗಿ ನಿರ್ಮಿಸಬೇಕಾದ ಅನಿವಾರ್ಯತೆ ಇದೆ ಎಂದರು.
ನಾಗಮಣಿ.ಸಿ.ಎನ್ ಮಾತನಾಡಿ, ಹದಿಹರೆಯದ ಮಕ್ಕಳಲ್ಲಿ ಇರುವ ಅವಕಾಶಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕೆಲಸ ನಾವು ಮಾಡಬೇಕಾಗಿದೆ. ಹೊಸ ಆಲೋಚನೆ, ಯೋಜನೆ ಬಗ್ಗೆ ಅವರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದರು.

ಕಾರ್ಯಾಗಾರದ ಸಂಚಾಲಕಿ ಡಾ.ಎಂ.ಎಸ್.ಸಪ್ನಾ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಇತರರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗದ ಗ್ರಾಮೀಣ ಮಟ್ಟದ ವರದಿಗಾರರು, ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net