ಮಹಿಳಾ ಪತ್ರಕತೆರ್ಯರಿಗೆ ಆತ್ಮ ವಿಶ್ವಾಸವೇ ಅಸ್ತ್ರ

VJP 5-2
Published on

ವಿಜಯಪುರ: ಮಾಧ್ಯಮದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದಾಗ ಮಾತ್ರ ವೃತ್ತಿ ಬದುಕಿನಲ್ಲಿ ಮೊದಲ ಹೆಜ್ಜೆ ಇಡಲು ಸಾಧ್ಯ ಎಂದು ಹಿತೈಶೀನಿ ಪೊರ್ಟಲ್ ಮಿಡಿಯಾದ ಸಂಪಾದಕಿ ಡಾ.ಆರ್. ಪೂರ್ಣಿಮಾ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗ ಇವರ ಸಂಯುಕ್ತಾಶ್ರಯದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ‘ಮಹಿಳಾ ಪತ್ರಕರ್ತೆಯರು: ಸಮಸ್ಯೆಗಳು, ಸವಾಲುಗಳು ಹಾಗೂ ಅವಕಾಶಗಳು’ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಧ್ಯಮ ಲೋಕ ಇಂದು ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ. ಮಹಿಳೆಯರು ಸಾಕಷ್ಟು ಜನ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ, ನಾನು ಮಹಿಳೆ ಎಂಬ ಹಿಂಜರಿಕೆಯನ್ನು ತೊಡೆದು ನಿಂತು ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ನಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದರು.
ಇಂದು ಪತ್ರಿಕೋದ್ಯಮ ಉದ್ಯಮವಾಗಿ ಬದಲಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ತಂತ್ರಜ್ಞಾನದ ಜತೆಗೆ ಹೆಜ್ಜೆ ಹಾಕುವುದು ನಮ್ಮ ಮುಂದಿರುವ ಸವಾಲು, ಅದನ್ನು ಎದುರಿಸುವ ಕೌಶಲಗಳನ್ನು ನಾವು ಕರಗತ ಮಾಡಿಕೊಳ್ಳಬೇಕು. ನಾನು 40 ವರ್ಷಗಳ ಹಿಂದೆ ಪತ್ರಿಕಾ ರಂಗಕ್ಕೆ ಕಾಲಿಟ್ಟಿದ್ದೆ. ಆಗಿರುವುದಕ್ಕೂ ಈಗಿರುವುದಕ್ಕೂ ಬಹಳವೇ ವ್ಯತ್ಯಾಸವಿದೆ. ನಮ್ಮ ಕಾಲದಲ್ಲಿ ತಂತ್ರಜ್ಞಾನ ಇಷ್ಟೊಂದು ಬೆಳೆದಿರಲಿಲ್ಲ. ಆದರೆ ಪ್ರಸ್ತುತ ದಿನಮಾನದಲ್ಲಿ ತಂತ್ರಜ್ಞಾನ ಅತ್ಯಂತ ವಿಸ್ತಾರವಾಗಿ ಬೆಳೆದು ನಿಂತಿದ್ದು, ಅದರೊಡನೆಯೇ ನಾವು ಸಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಸದ್ಯದ ದಿನಗಳಲ್ಲಿ ಮಾಧ್ಯಮ ಆಳುವ ವರ್ಗದಪರ ಕೆಲಸ ಮಾಡುತ್ತಿರುವುದು ಬಹಳವೇ ದುಃಖಕರ. ಇಂದು ಹಲವಾರು ಪತ್ರಿಕೆ ಮತ್ತು ಚಾನೆಲ್‌ಗಳು ಆಳುವ ವರ್ಗದವರ ತೊಡೆಯ ಮೇಲೆ ಕುಳಿತು ಕೊಳ್ಳುವ ಕೆಲಸ ಮಾಡುತ್ತಿವೆ. ಇದು ಮಾಧ್ಯಮದ ಕೆಲಸವಲ್ಲ. ಮಾಧ್ಯಮದ ಕೆಲಸ ಸಮಾಜದ ಒಳಿತಿಗಾಗಿ ದುಡಿಯುವುದು. ಸಮಾಜವನ್ನು ತಿದ್ದುವುದು ಅದನ್ನೆಲ್ಲ ಮರೆತು ಇಂದು ಮಾಧ್ಯಮ ರಂಗ ಮರೆತಿರುವುದು ವಿಷಾದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಲಿಂಗ ತಾರತಮ್ಯ ಎಲ್ಲ ರಂಗದಲ್ಲಿಯೂ ಇದೆ. ಇದು ಮಹಿಳೆಯರ ಮೇಲೆ ಅತ್ಯಂತ ಕೆಟ್ಟ ಪ್ರಭಾವ ಬೀರುತ್ತಿದೆ. ಆದರೆ ನಾವೆಲ್ಲರೂ ಇದನ್ನು ತೊಡೆದು ಹಾಕಿ ಮೆಟ್ಟಿ ನಿಲ್ಲ ಬೇಕಾಗಿದೆ. ಹೀಗೆ ಮಾಧ್ಯಮರಂಗದಲ್ಲಿಯೂ ಸಹ ಅಷ್ಟೇ ನಾವು ಅಲ್ಲಿಯ ಉನ್ನತ ಹುದ್ದೆಗಳನ್ನ ಗಮನಿಸಿದ್ದೇ ಆದಲ್ಲಿ ಅಲ್ಲಿ ಅತೀ ಹೆಚ್ಚು ನಮಗೆ ಪುರುಷರೆ ಕಂಡು ಬರುತ್ತಾರೆ. ಇಂತಹ ಎಲ್ಲ ಸವಾಲುಗಳನ್ನು ನಾವು ಎದುರಿಸಿ ಮುನ್ನುಗ್ಗಿ ಗೆದ್ದು ತೋರಿಸಬೇಕು ಎಂದರು.
ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಗೌಡ ಕಾಕಡೆ, ಸಹಾಯಕ ಪ್ರಾಧ್ಯಾಪಕ ಸಂದೀಪ, ವಿವಿಧ ವಿಭಾಗಗಳಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಸ್ವಾಗತಿಸಿದರು, ಸಂಶೋಧನಾ ವಿದ್ಯಾರ್ಥಿನಿ ಸುವರ್ಣ ಶಿ ಕಂಬಿ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಞಾನಜ್ಯೋತಿ ಚಾಂದಕವಠೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net