ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ

VJP 30-6
Published on

ವಿಜಯಪುರ: ಶಿಕ್ಷಣ ಬದುಕನ್ನು ರೂಪಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಅವರು ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಕರ್ನಾಟಕ ಸರ್ಕಾರದ ಖಜಾನೆ ಇಲಾಖೆ ಜಂಟಿ ನಿರ್ದೇಶಕಿ ವಿ. ಭಾಗ್ಯಲಕ್ಷ್ಮಿ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ಪುತ್ರಿಯರ ದಿನ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಅನೇಕ ಸಂಸ್ಕೃತಿ, ಜಾತಿ ಧರ್ಮಗಳಿವೆ. ನಾವು ಹಲವು ವೈವಿಧ್ಯತೆಗಳ ಮಧ್ಯೆ ಬದುಕು ಸಾಗಿಸುತ್ತಿದ್ದೇವೆ. ಜನಸಂಖ್ಯೆಯ ಅರ್ಧದಷ್ಟು ಸಂಖ್ಯೆಯಲ್ಲಿರುವ ಮಹಿಳೆಯರ ಚರಿತ್ರೆಯನ್ನು ತುಂಬಾ ಆಧುನಿಕವಾಗಿ ಪುನರ್ ರಚಿಸಬೇಕಿದೆ ಎಂದು ಅವರು ಹೇಳಿದರು.

ಹೆಣ್ಣುಮಕ್ಕಳು ತಮ್ಮ ಇತಿ-ಮಿತಿಗಳನ್ನು ಮೀರಿ ಮುಂದೆ ಹೆಜ್ಜೆ ಇಟ್ಟಾಗ ಮಾತ್ರ ಸಾಧಿಸಲು ಸಾಧ್ಯ. ನಮ್ಮ ಚಿಂತನೆ, ಆಲೋಚನೆಗಳು ಸ್ಪಷ್ಟವಾಗಿರಬೇಕು. ಎಲ್ಲರೂ ಬಲಿಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಲು ಸದೃಢರಾಗಿ ಎಂದು ಅವರು ವಿದ್ಯಾರ್ಥಿನಿಯರಿಗೆ ಹೇಳಿದರು.

ಮಹಿಳಾ ವಿವಿ ಮೌಲ್ಯಮಾಪನಾ ಕುಲಸಚಿವ ಪ್ರೊ. ಪಿ.ಜಿ. ತಡಸದ ಪರೀಕ್ಷಾ ವಿಭಾಗದ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಸಾಮರ್ಥ್ಯ ವೃದ್ಧಿಗಾಗಿ ಶಿಕ್ಷಣದ ಜತೆಗೆ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅದರೊಂದಿಗೆ ನಿರಂತರ ಕಲಿಕೆ, ಪಠ್ಯಕ್ರಮ ಕಲಿಕಾ ವಿಧಾನ ಅತ್ಯವಶ್ಯಕ ಎಂದು ಹೇಳಿದರು. ಕಲಿಕೆ ಜತೆಗೆ ವಿದ್ಯಾರ್ಥಿನಿಯರಿಗೆ ಶಾಂತಚಿತ್ತ, ನಿರ್ವಹಣಾ ಕೌಶಲ ಹಾಗೂ ನಾಯಕತ್ವ ಗುಣಗಳು ಬಹು ಮುಖ್ಯ. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಗಾಂಧಿ ಅಧ್ಯಯನ ಕೇಂದ್ರ ಮತ್ತು ಎನ್‌ಎಸ್‌ಎಸ್ ಕೋಶದ ವತಿಯಿಂದ ಹುತಾತ್ಮರ ದಿನಾಚರಣೆಯ ಪ್ರಯುಕ್ತ ಮೌನಾಚರಿಸಲಾಯಿತು. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಡಾ. ಸಕ್ಪಾಲ ಹೂವಣ್ಣ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ. ಭಾರತಿ ಗಾಣಿಗೇರ ಪರಿಚಯಿಸಿದರು. ಭಾರತಿ ಎನ್.ಹಿರೇಮಠ ವಂದಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಷ್ಣು ಎಂ. ಶಿಂಧೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net