

ವಿಜಯಪುರ: ಭದ್ರಾ ಮೇಲ್ದಂಡೆ ಯೋಜನೆ, ಕರೊನಾ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರವೇ ಬಿಜೆಪಿ ಧ್ಯೇಯವಾಗಿದೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಆರೋಪಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದೆ ಎಂದು ಅವರ ಪಕ್ಷದ ಶಾಸಕ ಎಚ್. ವಿಶ್ವನಾಥ ಅವರೇ ಗಂಭೀರವಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ, ಹಾಗಾದರೆ ‘ಮೌನಂ ಸಮ್ಮತಿ ಲಕ್ಷಣಂ’ ಎಂಬಂತೆ ಭ್ರಷ್ಟಾಚಾರ ಮಾಡಿದ್ದು ನಿಜವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವ್ಯಂಗ್ಯವಾಡಿದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಹಿರಂಗವಾಗಿ ಹೇಳುತ್ತಿದ್ದಾರೆ, ಸೂಪರ್ ಸಿಎಂ ವಿಜಯೇಂದ್ರ ಅವರ ಬಗ್ಗೆ ಸಚಿವ ಸಿ.ಪಿ. ಯೋಗಿಶ್ವರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈಚೆಗಷ್ಟೇ ಸಚಿವ ಶ್ರೀರಾಮಲು ಅವರ ಆಪ್ತ ಸಹಾಯಕನ ಬಂಧನ ಸಹ ಆಗಿದೆ.
ಇದರಲ್ಲಿಯೂ ವಿಜಯೇಂದ್ರ ಅವರ ಹೆಸರು ತಳುಕು ಹಾಕಿಕೊಂಡಿದ್ದು, ಶ್ರೀರಾಮಲು ಅವರು ಸಹ ವಿಜಯೇಂದ್ರ ಅವರ ವಿರುದ್ಧ ಗುಡುಗಿದ್ದಾರೆ. ಈ ರೀತಿ ಆಡಳಿತ ಪಕ್ಷದವರೇ ಖಾರವಾಗಿ ಸರ್ಕಾರದ ನಡೆಯನ್ನು ಟೀಕಿಸುತ್ತಿರುವಾಗ ಜನರಿಗೂ ಸರ್ಕಾರದ ವೈಫಲ್ಯ ಅರ್ಥವಾಗಿದೆ ಎಂದರು.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಹಣ ಇಂದಿಗೂ ಧಕ್ಕಿಲ್ಲ, ಮುಖ್ಯಮಂತ್ರಿಗಳು ಈ ವಿಷಯವಾಗಿ ಕೇಂದ್ರಕ್ಕೆ ಒತ್ತಡ ತರುವ ಬದಲು ಕೇವಲ ಖುರ್ಚಿ ಉಳಿಸಿಕೊಳ್ಳಲು ಕೇಂದ್ರವನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದ ಪರಿಸ್ಥಿತಿ ಅಧೋಗತಿಗೆ ಹೋದರೂ ಚಿಂತೆಯಿಲ್ಲ ಇವರಿಗೆ ಇವರ ಕುರ್ಚಿ ಮಾತ್ರ ಮುಖ್ಯ ಎಂದರು.
ಮುಖಂಡರಾದ ವೈಜನಾಥ ಕರ್ಪೂರಮಠ, ನಾಗರಾಜ್ ಲಂಬು, ವಸಂತ ಹೋನಮೋಡೆ, ತಾಜುದ್ದೀನ್ ಖಲೀಫಾ ಮತ್ತಿತರರಿದ್ದರು.