

ವಿಜಯಪುರ: ಧಾರವಾಡ ಕೃಷಿ ವಿವಿ ವ್ಯಾಪ್ತಿಯ ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಜ.4 ರಿಂದ ಮೂರು ದಿನ ಕೃಷಿ ಮೇಳ-2019-20 ಆಯೋಜಿಸಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ - ಆರೋಗ್ಯ ರಕ್ಷಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಮೇಳ ನಡೆಯಲಿದೆ ಎಂದು ಮಹಾವಿದ್ಯಾಲಯದ ಡೀನ್ ಹಾಗೂ ಮೇಳದ ಅಧ್ಯಕ್ಷ ಡಾ.ಎಸ್.ಬಿ. ಕಲಘಟಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಣ್ಣಿನ ಆರೋಗ್ಯ, ಕೃಷಿಯ ಸೌಭಾಗ್ಯ, ಸಿರಿ ಧಾನ್ಯ ಬಳಸಿ ಆರೋಗ್ಯ ವೃದ್ಧಿಸಿ, ತೋಟಗಾರಿಕೆ ಬೆಳೆ ಸಂರಕ್ಷಣೆ ತಂತ್ರಜ್ಞಾನ, ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಮಹತ್ವ ಕುರಿತು ಕೃಷಿ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಈ ಬಾರಿ ಜಾನುವಾರು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜ.4ರಂದು ಬೆಳಗ್ಗೆ 9 ರಿಂದ 1ರವರೆಗೆ ಜಾನುವಾರ ಪ್ರದರ್ಶನದಲ್ಲಿ ಆಕಳು ಮತ್ತು ಎಮ್ಮೆಗಳ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಮಣ್ಣಿನ ಆರೋಗ್ಯ, ಕೃಷಿ ಸೌಭಾಗ್ಯ ಕುರಿತು ಕೃಷಿ ಗೋಷ್ಠಿ ನಡೆಯಲಿದೆ. ಜ.5 ರಂದು ಬೆಳಗ್ಗೆ 9 ರಿಂದ 1 ರವರೆಗೆ ಶ್ವಾನ ಪ್ರದರ್ಶನ ನಡೆಯಲಿದೆ. 11 ರಿಂದ ಮಧ್ಯಾಹ್ನ 1ರವರೆಗೆ ಸಿರಿಧಾನ್ಯ ಬಳಸಿ, ಆರೋಗ್ಯ ವೃದ್ಧಿಸಿ ಹಾಗೂ ಮಧ್ಯಾಹ್ನ 2 ರಿಂದ 4 ರವರೆಗೆ ದ್ರಾಕ್ಷಿ, ದಾಳಿಂಬೆ ಮತ್ತು ಲಿಂಬೆ ಬೆಳೆಗಳ ಸಸ್ಯ ಸಂರಕ್ಷಣೆ ತಂತ್ರಜ್ಞಾನ ಕುರಿತು ಗೋಷ್ಠಿ ನಡೆಯಲಿವೆ. ಜ.6 ರಂದು ಬೆಳಗ್ಗೆ 9 ರಿಂದ 1ರವರೆಗೆ ಕುರಿ ಮತ್ತು ಆಡುಗಳ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಮಹತ್ವ ಕುರಿತು ಕೃಷಿ ಗೋಷ್ಠಿ ನಡೆಯಲಿದೆ ಎಂದು ಡಾ.ಕಲಘಟಗಿ ತಿಳಿಸಿದರು.
ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಡಾ. ದೇವಾನಂದ ಚವ್ಹಾಣ ಅಧ್ಯಕ್ಷತೆ ವಹಿಸುವರು. ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಪಾಲ್ಗೊಳ್ಳುವರು. ಶಾಸಕರಾದ ಎಂ.ಸಿ. ಮನಗೂಳಿ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಎ.ಎಸ್. ಪಾಟೀಲ ನಡಹಳ್ಳಿ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಅರುಣ ಶಹಾಪುರ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಹಣಮಂತ ನಿರಾಣಿ, ಎಸ್.ಆರ್. ಪಾಟೀಲ, ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಾ.ಎಸ್.ಎಸ್. ಕರಭಂಟನಾಳ ಅವರು ಕೃಷಿಯಲ್ಲಿ ಎರೆಹುಳ್ಳು ಗೊಬ್ಬರ ಮತ್ತು ಎರೆಜಲದ ಮಹತ್ವ, ಡಾ.ಜಿ. ಶ್ರೀನಿವಾಸುಲು ಸೂಕ್ಷ್ಮಾಣು ಜೀವಿ ಅಥವಾ ಜೈವಿಕ ಗೊಬ್ಬರ, ಎಸ್.ಎಂ. ವಸ್ತ್ರದ ಅವರು ಕಡಲೆ ಮತ್ತು ದ್ರಾಕ್ಷಿಯಲ್ಲಿ ರೋಗ ನಿರ್ವಹಣೆ, ಡಾ.ಪಿ.ಎಸ್. ಪತ್ತಾರ ಅವರು ಅಖಿಲ ಭಾರತ ಕೃಷಿ ಹವಾಮಾನಶಾಸ್ತ್ರದ ಸಮನ್ವಿತ ಸಂಶೋಧನಾ ಯೋಜನೆ, ಡಾ.ಎ.ಪಿ. ಬಿರಾದಾರ ಅವರು ಫಾಲ್ ಆರ್ಮಿವರ್ಮ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ.ಎಚ್. ಬಿ. ಬಬಲಾದ, ಕೃಷಿ ಜಂಟಿ ನಿರ್ದೇಶಕ ಡಾ. ಶಿವಕುಮಾರ, ಸಹ ಕೃಷಿ ವಿಸ್ತರಣಾಧಿಕಾರಿ ಡಾ.ಆರ್.ಬಿ. ಬೆಳ್ಳಿ, ವಾರ್ತಾಧಿಕಾರಿ ಸುಲೆಮಾನ್ ನದಾಫ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಉತ್ತರ ಕರ್ನಾಟಕದ ಜವಾರಿ ಜೋಳ ದಿನೇ ದಿನೇ ಅವಸಾನದ ಅಂಚಿಗೆ ಹೊರಟಿದೆ. ಇದಕ್ಕೆ ಕಾರಣ ಈವರೆಗೂ ಜೋಳ ಕಟಾವಿಗೆ ತಾಂತ್ರಿಕ ಸೌಲಭ್ಯ ಇಲ್ಲದಿರುವುದು. ಹೀಗಾಗಿ ಜೋಳ ತಾಂತ್ರಿಕತೆಗೆ ಒತ್ತು ನೀಡುತ್ತಿರುವುದಾಗಿ ಕೃಷಿ ಯಂತ್ರೋಪಕರಣಗಳ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಡಾ.ರಮೇಶ ಬಿರಗೆ ಪ್ರತಿಕ್ರಿಯಿಸಿದರು.
2017-18ರಿಂದ ಕಾರ್ಯಾರಂಭಗೊಂಡಿರುವ ಕೃಷಿ ಯಂತ್ರೋಪಕರಣ ಪರೀಕ್ಷಾ ಕೇಂದ್ರದಿಂದ ಈಗಾಗಲೇ ಇಂಥದ್ದೊಂದು ಯಂತ್ರ ಪರಿಚಯಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ಆದರೆ, ಜೋಳ ಬೆಳೆ ಯಂತ್ರೋಪಕರಣಗಳ ಮೂಲಕ ಕಟಾವಿಗೆ ಸೂಕ್ತವಾಗಿಲ್ಲ. ಹೀಗಾಗಿ ಸುಧಾರಿತ ಯಂತ್ರೋಪಕರಣಕ್ಕೆ ಆದ್ಯತೆ ಕಲ್ಪಿಸುತ್ತಿರುವುದಾಗಿ ತಿಳಿಸಿದರು.
ಪಶು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ. ಮುಖರ್ತಾಳ್ ಮಾತನಾಡಿ, ಜಾನುವಾರು ಪ್ರದರ್ಶನದಲ್ಲಿ ಈ ಬಾರಿ ಹೊಸ ಹೊಸ ತಳಿ ಪರಿಚಯಿಸಲಾಗುತ್ತಿದೆ. ಪ್ರಾಣಿಗಳಲ್ಲಿ ಮೈಕೋಬ್ಯಾಕ್ಟೀರಿಯಂ ಏವಿಯಂ ಉಪ ಜಾತಿ ಪ್ಯಾರಾ ಟ್ಯುಬರ್ ಕ್ಯುಲೋಸಿಸ್ ರೋಗ ಪತ್ತೆ ಮಾಡಲು ಇನ್‌ಡೈರಕ್ಟ್ ಎಲಿಸಾ ಕಿಟ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಿಟ್ ಅತೀ ಕಡಿಮೆ ದರದಲ್ಲಿ ರೈತರಿಗೆ ಲಭ್ಯವಾಗಲಿದ್ದು ಆ ಬಗ್ಗೆ ರೈತರಿಗೆ ತಿಳಿಸಿಕೊಡುವ ಪ್ರಯತ್ನ ನಡೆದಿದೆ ಎಂದರು.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ. ಎಚ್.ಬಿ. ಬಬಲಾದ್ ಅವರು, 2019-20ರಲ್ಲಿ ಕೃಷಿ ವಲಯ -3 ರ ಕೇಂದ್ರ ಸ್ಥಾನವಾದ ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಶೂನ್ಯ ಬಂಡವಾಳ ನೈಸರ್ಗಿ ಕೃಷಿ ಯೋಜನೆ ಅನುಷ್ಠಾನಗೊಳಿಸಿದೆ. ಆ ಪ್ರಯುಕ್ತ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಇತರೆ ಕೃಷಿ ಪದ್ಧತಿಗಳ ಜತೆ ತುಲನೆ ಮಾಡಲು ವಲಯ-3ರ ವಿವಿಧ ಬೆಳೆ ಪದ್ಧತಿಗಳಾದ ತೊಗರಿ, ತೊಗರಿ ಮತ್ತು ಹೆಸರು (1:2) ಅಂತರ ಬೆಳೆ, ಸಜ್ಜೆ-ಕಡಲೆ, ಹೆಸರು-ಕುಸುಬೆ, ಹೆಸರು-ಜೋಳ, ಸೂರ್ಯಕಾಂತಿ-ಕಡಲೆ ಸರತಿ ಬೆಳೆ ಪದ್ಧತಿಯಲ್ಲಿ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದರು.