

ವಿಜಯಪುರ: ಕರ್ತವ್ಯನಿರತ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಮಹಾನಗರ ಪಾಲಿಕೆಗಳ ನೌಕರರ ಸಂಘದ ನೌಕರರು ಸೋಮವಾರ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ಸುಕೂನ ಕಾಲನಿ ಒಳಚರಂಡಿ ಪರಿಶೀಲನೆ ಕಾರ್ಯಕ್ಕೆ ತೆರಳಿದಾಗ ಕೆಲ ದುಷ್ಕರ್ಮಿಗಳು ಪೂರ್ವನಿಯೋಜಿತವೆಂಬಂತೆ ಕುಡಿದ ಅಮಲಿನಲ್ಲಿ ಆಯುಕ್ತರ ವಾಹನಕ್ಕೆ ಡಿಕ್ಕಿ ಹೊಡೆದರಲ್ಲದೆ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯವೆಸಗಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಸರ್ಕಾರಿ ನೌಕರರಿಗೆ ಈ ರೀತಿ ಅಡ್ಡಿ ಪಡಿಸುವುದು, ಹಲ್ಲೆ ಮಾಡುವುದು, ಅವಾಚ್ಯ ಪದಗಳಿಂದ ನಿಂದಿಸುವುದು ಖಂಡನೀಯ ಎಂದರು.
ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ದುಷ್ಕರ್ಮಿಗಳನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಬೇಕು. ವಿಳಂಬವಾದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರಿ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ಮಾತನಾಡಿ, ಮದ್ಯಪಾನ ಮಾಡಿ ಏಕಾಏಕಿ ಗುಂಪು-ಗುಂಪಾಗಿ ಬಂದು ಹಲ್ಲೆ ಮಾಡಿದ್ದು, ಇದೊಂದು ಅರಾಜಕತೆಯಂತೆ ಎದ್ದು ಕಾಣುತ್ತದೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಪಾಲಿಕೆಯ ಪೌರ ಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮ್ಮಣ ಹಂದ್ರಾಳ ಮಾತನಾಡಿ, ಇದೊಂದು ಹೇಯ ಕೃತ್ಯ. ದುಷ್ಕರ್ಮಿಗಳು ತಾವು ಏನೇ ಮಾಡಿದರೂ ನಡಿಯುತ್ತದೆ ಎಂಬ ಹುಚ್ಚು ಕಲ್ಪನೆಯಿಂದ ಹೊರಬರಬೇಕು. ಕಾನೂನಿಗೆ ಶರಣಾಗಬೇಕೆಂದು ಹೇಳಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ, ಕಾರ್ಯದರ್ಶಿ ರಾಜಶೇಖರ ಧೈವಾಡಿ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ಜಗದೀಶ ಬೋಳಸೂರ, ಶಿವಾನಂದ ಮಂಗನ್ನವರ, ಉಮೇಶ ಕೌಲಗಿ, ನಿಜು ಮೇಲಿನಕೇರಿ, ಬಶೀರ್ ನದಾಫ್, ಶರಣಬಸು ಬೇನೂರ, ಎಚ್.ಕೆ. ಬೂದಿಹಾಳ, ಶಿವಲಿಂಗ ಪಟ್ಟಣಶೆಟ್ಟಿ, ವಿ.ಬಿ. ಕಂಪ್ಲಿ, ಅಜೀತ ಭುಸೇರಿ, ಆರ್.ಪಿ. ಚಲವಾದಿ, ಆರ್.ಬಿ. ಶಿರಶಾಡ, ಎಲ್.ಎಂ. ಮೋರೆ, ವಿಠ್ಠಲ ಹೊನ್ನಳ್ಳಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ನೌಕರರು ಪಾಲ್ಗೊಂಡಿದ್ದರು.