ಹತಾಶೆಗೊಂಡ ಹುಕ್ಕೇರಿಯಿಂದ ಹಣ ಹಂಚಿಕೆ, ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಹೇಳಿಕೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಅನರ್ಹಗೊಳಿಸಿ

IMG-20220613-WA0043
Published on

ವಿಜಯಪುರ: ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹತಾಶೆಗೊಂಡಿದ್ದು, ಸೋಲಿನ ಭೀತಿಯಿಂದ ಹಣ ಹಂಚುತ್ತಿದ್ದಾರೆ. ಹೀಗಾಗಿ ಅವರನ್ನು ಅನರ್ಹಗೊಳಿಸಬೇಕೆಂದು ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಚುನಾವಣೆ ಆಯೋಗಕ್ಕೆ ಆಗ್ರಹಿಸಿದರು.

ಇಲ್ಲಿನ ಗಾಂಧಿ ವೃತ್ತದ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿದ ಮತಗಟ್ಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಿಕ್ಷಕರ ಕ್ಷೇತ್ರದ ಗೌರವ ಹಾಳು ಮಾಡಿದೆ ಎಂದರು.

ಶಿಕ್ಷಕರ ಮತ ಮಾರಾಟಕ್ಕಿಲ್ಲ. ಶಿಕ್ಷಕರು ಪ್ರಬುದ್ಧರಾಗಿದ್ದಾರೆ. ಅವರ ಮತ ಹಣದಿಂದ ಖರೀದಿಸಬಹುದೆಂಬುದು ಭ್ರಮೆ ಎಂದರು.

ಶಿಕ್ಷಕರು ನಮ್ಮ ಪರ ಉತ್ಸಾಹದಿಂದ ಮತ ಹಾಕುತ್ತಿದ್ದಾರೆ. ಶಿಕ್ಷಕರೊಂದಿಗೆ ಬಾಂಧವ್ಯ ಇದೆ. ಹೀಗಾಗಿ ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲುವು ಸಾಧಿಸುವೆ ಎಂದರು.

ಕಾಂಗ್ರೆಸ್ ನವರು ಎಲ್ಲೆಲ್ಲಿ ಹಣ ಹಂಚಿದ್ದಾರೋ ಅಲ್ಲಿ ಒಳ್ಳೆಯ ವಾತಾವರಣ ಇದೆ ಎಂದವರು ಭಾವಿಸಿದ್ದಾರೆ. ಆದರೆ ಹಾಗಿಲ್ಲ.

ಹುಕ್ಕೇರಿ ಹೊಲದಲ್ಲಿ ಹಣ ಹಂಚಿಕೆ ಮಾಡುವಾಗ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನೂರಾರು ಜನ ಶಿಕ್ಷಕರು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಉಂಡವನೇ ಜಾಣ ಎಂದಂತಾಗಿದೆ.

ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಹಣ ಹಂಚುತ್ತಿರುವುದು ಸಣ್ಣತನ ಕೆಲಸ. ಈಗಲೂ ಹಂಚುತ್ತಿದ್ದಾರೆ.

ಮೊದಲು ಅವರನ್ನು ಅನರ್ಹಗೊಳಿಸಬೇಕು ಎಂದರು.

ಈಗಾಗಲೇ ಹಣ ಹಂಚಿಕೆಗೆ ಸಂಬಂಧಸಿದಂತೆ ಚುನಾವಣೆ ಅಧಿಕಾರಿಗಳಿಗೂ ದೂರು ಕೊಟ್ಟಿದ್ದೇವೆ. ವಿಜಯಪುರದಲ್ಲೂ ಬಹಿರಂಗ ಪ್ರಚಾರ ಮುಗಿದರೂ ಕೆಲವು ಲಾಡ್ಜ್ ಹಿಡಿದು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಶಹಾಪುರ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net