

ವಿಜಯಪುರ:ಇಂಡಿ ಹಾಗೂ ಚಡಚಣ ಭಾಗದ ಮಹತ್ವಾಕಾಂಕ್ಷಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರದ ಗಮನ ಸೆಳೆದಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ನಿಯಮ 73ರಡಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಗಮನ ಸೆಳೆಯುವ ಮೂಲಕ ಯೋಜನೆಗೆ ಮರುಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಶಾಸಕ ಯಶವಂತರಾಯಗೌಡ ಪಾಟೀಲ ಸಾಂವಿಧಾನಾತ್ಮಕ ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸಿದ್ದಾರೆ.
ಯೋಜನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಸರ್ಕಾರ ಇಂಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 2019-20ರ ಆಯವ್ಯಯ ಭಾಷಣದಲ್ಲಿ 250 ಕೋಟಿ ರೂ. ವೆಚ್ಛದಲ್ಲಿ ಇಂಡಿ ಹಾಗೂ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹೊರ್ತಿ-ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಘೋಷಿಸಿದೆ.
ತಿಡಗುಂದಿ ಶಾಖಾ ಕಾಲುವೆಯ ವಿಸ್ತರಣೆಯಿಂದ ಇಂಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತಾಂತ್ರಿಕವಾಗಿ ಸಾಧ್ಯವಾಗದೇ ಇರುವುದರಿಂದ ಪರ್ಯಾಯವಾಗಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಪ್ರತ್ಯೇಕವಾಗಿ 3.245 ಟಿಎಂಸಿ ನೀರು ಲಿಫ್ಟ್ ಮಾಡಿ ಇಂಡಿ ತಾಲೂಕಿನ ಸುಮಾರು 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಯೋಜಿಸಲಾಗಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 3.245 ಟಿಎಂಸಿ ನೀರಿನ ಬಳಕೆಯೊಂದಿಗೆ (100%ನೀರಿನ ಸಾಂದ್ರತೆ) ಪೈಪ್‌ಲೈನ್ ಜಾಲ ಅಳವಡಿಸಿ ನೀರಾವರಿ ಸೌಲಭ್ಯ ಕಲ್ಪಿಸಲು ಈಗಾಗಲೇ 2639.66 ಕೋಟಿ ರೂ.(2018-19ನೇ ಸಾಲಿನ ದರಪಟ್ಟಿ) ಅಂದಾಜು ಮೊತ್ತಕ್ಕೆ ವಿವರವಾದ ಯೋಜನಾ ವರದಿ ತಯಾರಿಸಲಾಗಿರುತ್ತದೆ. ಈ ವರದಿಯನ್ನು 2019 ಮೇ 4 ರಂದು ನಡೆದ ಕೃಷ್ಣಾ ಭಾಗ್ಯ ಜಲ ನಿಗಮದ 13ನೇ ತಾಂತ್ರಿಕ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಸಮಿತಿಯು ಯೋಜನೆಗೆ ಅವಶ್ಯಕ ನೀರಿನ ಹಂಚಿಕೆಯೊಂದಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲು ಮಾಡಿರುವ ಶಿಫಾರಸ್ಸಿನ ಮೇರೆಗೆ 2019, ಜು.9 ನಡೆದ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಸ್ತಾಪಿತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯಲು ತಿರುವಳಿ ನೀಡುತ್ತದೆ. ಪ್ರಸ್ತುತ 2639.66 ಕೋಟಿ ರೂ.ಅಂದಾಜು ಮೊತ್ತದ ಈ ಯೋಜನೆಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ. ಈ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಸಚಿವ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ರೇವಣಸಿದ್ಧೇಶ್ವರ ಏತ ನೀರಾಔರಿ ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಹೋರಾಟ ನಡೆಸುತ್ತಿದ್ದರೆ ಶಾಸಕ ಯಶವಂತರಾಯಗೌಡ ಪಾಟೀಲ ಮಾತ್ರ ಸರ್ಕಾರದ ಗಮನ ಸೆಳೆದು ವ್ಯವಸ್ಥಿತ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.