ವಿಜಯಪುರ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ

WhatsApp Image 2022-09-23 at 4.27.08 PM
ವಿಜಯಪುರ ನಗರದ ವಾರ್ತಾ ಮತ್ತು ಸಂಪರ್ಕ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಮನೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿದರು. ಗವಿಸಿದ್ಧಪ್ಪ ಹೊಸಮನಿ ಜತೆಗಿದ್ದರು
Published on

ವಿಜಯಪುರ : ನಗರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹೇಳಿದರು.

ನಗರದ ಇಂಡಿ ರಸ್ತೆಯಲ್ಲಿ 32 ಎಕರೆ ಜಾಗದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಈ ಘನ ತ್ಯಾಜ್ಯದಿಂದ ಬೇರ್ಪಡಿಸಲಾದ ಪ್ಲಾಸ್ಟಿಕ್‌ನ್ನು ಸಿಮೆಂಟ್ ಫ್ಯಾಕ್ಟರಿಗೆ ಇಂಧನವಾಗಿ ಬಳಸಲು ಕಳುಹಿಸಲಾಗುತ್ತಿದೆ ಎಂದು ಶುಕ್ರವಾರ ನಗರದ ವಾರ್ತಾ ಮತ್ತು ಸಂಪರ್ಕ ಇಲಾಖೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಮನೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಗರದ ಸ್ವಚ್ಛತೆ ಕಾಪಾಡಲು ನಮ್ಮ ಪಾಲಿಕೆ ಸಿಬ್ಬಂದಿ ಬೆಳಗ್ಗೆ 5 ಗಂಟೆಗೆ ತಮ್ಮ ಕಾಯಕ ಆರಂಭಿಸುತ್ತಾರೆ. ನಗರದಲ್ಲಿ ಪ್ರತಿ ನಿತ್ಯ 10 ಟಿಪ್ಪರ್ ಹಾಗೂ 10 ಟ್ರಾೃಕ್ಟರ್‌ಗಳ ಮೂಲಕ ಸುಮಾರು 120 ಟನ್ ತ್ಯಾಜ್ಯವನ್ನು ನಗರದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ. ಒಟ್ಟು 80 ಸಾವಿರ ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಆ ಮೂಲಕ ನಗರದ ಸಾರ್ವಜನಿಕರಿಗೆ ಸ್ವಚ್ಛ ಪರಿಸರ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಕಡುಬಡವರಿಗೆ ವಸತಿ ಸೌಲಭ್ಯ
ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 1493 ಜಿ ಪ್ಲಸ್ ಮಾದರಿ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಮನೆಗಳು ಬಡವರಿಗೆ ಸೂರು ಕಲ್ಪಿಸಲಿವೆ. ಇನ್ನುಳಿದಂತೆ ಡಾ.ಅಂಬೇಡ್ಕರ್ ವಸತಿ ಯೋಜನೆಯಲ್ಲಿ 228 ಮನೆಗಳು ಹಾಗೂ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 300 ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಗತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ 125 ಕೋಟಿ ರೂ. ಹಾಗೂ 30 ಕೋಟಿ ರೂ. ಅನುದಾನ ಬಳಸಿ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 15ನೇ ಹಣಕಾಸು ಯೋಜನೆ ಅಡಿ 15 ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾನದರಿ 50 ಕೋಟಿ ರೂ. ನಲ್ಲಿ ನಗರದ ಬೀದಿದೀಪ, ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ಯಾಸ್ ಪೈಪ್ ಅಳವಡಿಕೆಗೆ ಸರ್ವೇ
ನಗರದಾದ್ಯಂತ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಖಾಸಗಿ ಕಂಪನಿಯಿಂದ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಅದರಂತೆ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸಲಾಗಿದ್ದು, ಈವರೆಗೂ 2600 ಜನ ಬೀದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸ್ವ ಉದ್ಯೋಗಕ್ಕಾಗಿ ಕಿರು ಸಾಲ ನೀಡಲಾಗಿದೆ. ಸಾರ್ವಜನಿಕರಿಗೆ ಟ್ಯಾಕ್ಸ್ ಕಟ್ಟಲು ಅನುಕೂಲವಾಗುವಂತೆ ಭಾರತ ಬಿಲ್ (ಆನ್‌ಲೈನ್) ಪೇಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಹಂದಿ, ನಾಯಿ, ಬಿಡಾಡಿ ದನಗಳ ಸ್ಥಳಾಂತರ
ನಗರದಲ್ಲಿ ಹಂದಿ, ನಾಯಿ ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಸ್ಥಳಾಂತರಕ್ಕೆ ಈಗಾಗಲೇ ಸಂಬಂಧಿಸಿದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. 15 ದಿನಗಳಲ್ಲಿ ಬೇರೆಡೆ ಸ್ಥಳಾಂತರ ಮಾಡುವ ಮೂಲಕ ಸರಳ ವಾಹನ ಸಂಚಾರ ಹಾಗೂ ಸ್ವಚ್ಛತೆಗೆ ಒತ್ತು ನೀಡಲಾಗುವುದು ಎಂದರು.

30 ಕೋಟಿ ರೂ. ಆದಾಯ ಸಂಗ್ರಹದ ಗುರಿ
ಪ್ರಸಕ್ತ ಸಾಲಿನಲ್ಲಿ ಪಾಲಿಕೆ ಬೊಕ್ಕಸಕ್ಕೆ ಆದಾಯ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದು, 30 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅನಧೀಕೃತ ಫ್ಲೆಕ್ಸ್, ಬ್ಯಾನರ್ಸ್‌ ಗಳ ತೆರವು ಕಾರ್ಯ ನಡೆಯುತ್ತಿದೆ. ಅನಧೀಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಲಾಗಿದೆ. ಅನಧೀಕೃತವಾಗಿ ಈಗಾಗಲೇ ನಿರ್ಮಾಣಗೊಂಡ ಬಡಾವಣೆಗಳಲ್ಲಿ ಡಬಲ್ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಜನರ ಸಮಸ್ಯೆ ಆಲಿಸಲು ನಗರದಲ್ಲಿ ಮೂರು ಕಡೆಗಳಲ್ಲಿ ವಲಯ ಕಚೇರಿಗಳನ್ನು ಆರಂಭಿಸಲಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ಧಪ್ಪ ಹೊಸಮನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net