ಭಾವೈಕ್ಯತೆಗೆ ಸಾಕ್ಷಿಯಾದ ಹೂವಿನಹಡಗಲಿ

ಮರುಪ್ರತಿಷ್ಠಾಪನೆಗೊಂಡ ಗಣೇಶನಿಗೆ ಮುಸ್ಲಿಮರಿಂದ ಪೂಜೆ
ಹೂವಿನಹಡಗಲಿಯಲ್ಲಿ ಮುಸ್ಲಿಮರಿಂದ ಗಣಪತಿಗೆ ವಿಶೇಷ ಪೂಜೆ
ಹೂವಿನಹಡಗಲಿಯಲ್ಲಿ ಮುಸ್ಲಿಮರಿಂದ ಗಣಪತಿಗೆ ವಿಶೇಷ ಪೂಜೆ
Published on: 

ಹೂವಿನಹಡಗಲಿ (ವಿಜಯನಗರ):

ಪಟ್ಟಣದಲ್ಲಿ ಇತ್ತೀಚೆಗೆ ಗಣಪತಿ ಮೆರವಣಿಗೆ ವೇಳೆ ಉಂಟಾಗಿದ್ದ ಸಣ್ಣ ಗೊಂದಲಕ್ಕೆ ಸೌಹಾರ್ದತೆಯ ಮೂಲಕ ತೆರೆ ಬಿದ್ದಿದ್ದು, ಹೂವಿನಹಡಗಲಿ ಪಟ್ಟಣ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

​ಸ್ಥಳೀಯ ಕೊರವರ ಓಣಿಯಲ್ಲಿ ಶಾಸ್ತ್ರೋಕ್ತವಾಗಿ ಮರುಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗೆ ಇಸ್ಲಾಂಪೇಟೆಯ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು ವಿಶೇಷ ಪೂಜೆ ಸಲ್ಲಿಸಿ, ನಂತರ ಸಡಗರದಿಂದ ಗಣೇಶನ ವಿಸರ್ಜನೆಗೆ ಬೀಳ್ಕೊಟ್ಟರು.

​ಘಟನೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ಸ್ಥಳೀಯ ಶಾಸಕ ಕೃಷ್ಣಾನಾಯಕ್ ಅವರ ನೇತೃತ್ವದಲ್ಲಿ ಎರಡೂ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿದ ಫಲವಾಗಿ ಪರಿಸ್ಥಿತಿ ತಿಳಿಗೊಂಡಿತು.

​ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಹಬ್ಬವನ್ನು ಆಚರಿಸುವ ಮೂಲಕ ಎರಡೂ ಕೋಮುಗಳ ಜನರು ಸಮಾಜಕ್ಕೆ ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಅತ್ಯುತ್ತಮ ಸಂದೇಶ ರವಾನಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ತ್ವರಿತ ಮಧ್ಯಪ್ರವೇಶಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net