ಹೊಸಪೇಟೆ ಪುನೀತ್ ರಾಜಕುಮಾರ್ ವೃತ್ತದಲ್ಲಿ ಮುಸ್ಲಿಂ ಸಮುದಾಯದಿಂದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರತಿಭಟನೆ ನಡೆಸಿದರು. ಹುಡಾ ಅಧ್ಯಕ್ಷ ಎಚ್. ಎನ್.ಮೊಹಮ್ಮದ್ ಇಮಾಮ್ ನಿಯಾಜಿ, ಪ್ರಮುಖರಾದ ಪೀರೋಜ್ ಖಾನ್, ಎಮ್.ಎಮ್. ಗೌಸ್, ಕೊತ್ವಲ್ ಮೊಸೀನ್, ಡಾ.ದರ್ವೇಶ, ಅನ್ಸರ್ ಭಾಷಾ, ಅಯತ್ ರಸೂಲ್, ದಾದಾಪೀರ್ , ಎನ್. ಎಸ್ ರಫೀಕ್, ಸೈಯದ್ ಬುಡೇನ್, ಜಾವೀದ್, ಹುಸೇನ್ ಇತರರಿದ್ದರು.
ಹೊಸಪೇಟೆ: ರಾಜ್ಯ ರಾಜಕಾರಣದಲ್ಲಿ ಸಚಿವರ ರಾಜೀನಾಮೆ ಹಾಗೂ ಸಂಪುಟ ಪುನಾರಚನೆ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿಲ್ಕೂ ಸಚಿವ ಸ್ಥಾನಕ್ಕಾಗಿ ಒತ್ತಾಯದ ಕಿಡಿ ಹೊತ್ತಿಕೊಂಡಿದ್ದು ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ನಗರದ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ದಾವಣಗೆರೆ ಮೂಲದ ಆಡಿಯೋ ಒಂದನ್ನು ಮುನ್ನಲೆಗೆ ತಂದು ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ. ಇದೇ ಕಾರಣಕ್ಕೆ ಸದ್ಯ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆಯಲಾಗಿದೆ. ರಾಜಕೀಯ ದ್ವೇಷದಿಂದ ನಡೆದಿರುವ ಈ ಪಿತೂರಿಯನ್ನು ಹೈಕಮಾಂಡ್ ನಂಬಬಾರದು. ಅವರು ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಮುಸ್ಲಿಂ ಸಮುದಾಯ ಅಷ್ಟೇ ಅಲ್ಲದೆ, ಜಾತಿ-ಧರ್ಮದ ಭೇದವಿಲ್ಲದೆ ಕಷ್ಟ ಎಂದು ಬಂದ ಯಾವುದೇ ಸಮುದಾಯದ ಜನರಿಗೂ ಅವರು ಧಾವಿಸಿ ಸಹಾಯ ಮಾಡುತ್ತಾರೆ. ಅವರು ನಿಜ ಅರ್ಥದಲ್ಲಿ ಸರ್ವಜನಾಂಗದ ನಾಯಕ ಎಂದು ಒತ್ತಾಯಿಸಿದರು.
ಜಮೀರ್ ಅಹ್ಮದ್ ಖಾನ್ ವಿರುದ್ಧದ ಷಡ್ಯಂತ್ರಗಳನ್ನು ಹೈಕಮಾಂಡ್ ತಳ್ಳಿಹಾಕಬೇಕು. ತಕ್ಷಣವೇ ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಂಪುಟದಲ್ಲಿ ಸೂಕ್ತ ಸಚಿವ ಸ್ಥಾನ ನೀಡಬೇಕು. ಅವರಿಗೆ ಸಚಿವ ಸ್ಥಾನ ನೀಡದೇ ಹೋದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ಇದು ಪಕ್ಷಕ್ಕೆ ತುಂಬಲಾರದ ದೊಡ್ಡ ನಷ್ಟವನ್ನು ಉಂಟುಮಾಡಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.