ಪೊಲೀಸರ ದೈಹಿಕ ದೃಢತೆಗೆ ಯೋಗ ಸಹಕಾರಿ

ಹೊಸಪೇಟೆ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಡೆದ ಯೋಗ ತರಬೇತಿ ಶಿಬಿರದಲ್ಲಿ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಡಾ.ಮಂಜುನಾಥ, ಪಿಐ ಹುಲಗಪ್ಪ ಸೇರಿ ಇತರರಿದ್ದರು.
ಹೊಸಪೇಟೆ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಡೆದ ಯೋಗ ತರಬೇತಿ ಶಿಬಿರದಲ್ಲಿ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಡಾ.ಮಂಜುನಾಥ, ಪಿಐ ಹುಲಗಪ್ಪ ಸೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಗ ತರಬೇತಿ ಶಿಬಿರದಲ್ಲಿ ಎಸ್ಪಿ ಎಸ್.ಜಾಹ್ನವಿ ಕರೆ
ಹೊಸಪೇಟೆ: ಯೋಗ, ಪ್ರಾಣಾಯಾಮಗಳಿಂದ ದೇಹದ ಬೊಜ್ಜು ಕರಗಿಸುವುದು ಮಾತ್ರವಲ್ಲ, ಮಾನಸಿಕ ಸದೃಢತೆ ಸಾಧಿಸಬಹುದು ಎಂದು ಎಸ್ಪಿ ಎಸ್.ಜಾಹ್ನವಿ ಹೇಳಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದಿಂದ ಇಲ್ಲಿನ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ಹೊಸಪೇಟೆ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 15 ದಿನಗಳ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿ ಸದಾ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಬೇಕು. ಬೊಜ್ಜು ಬೆಳೆಸಿಕೊಳ್ಳಬಾರದು. ಶೀಘ್ರದಲ್ಲೇ ಬಿಎಂಐ ಯಂತ್ರದ ಮೂಲಕ ಬೊಜ್ಜು ಪರೀಕ್ಷೆ ಕಡ್ಡಾಯಗೊಳಿಸಲಾಗುವುದು. ಫ್ಯಾಟ್ ಪರೀಕ್ಷೆ ಮುಂದಿನ ದಿನಗಳಲ್ಲಿ ಆಗಾಗ ನಡೆಯುತ್ತಲೇ ಇರಲಿದೆ, ಹೀಗಾಗಿ ಈ ಶಿಬಿರದಲ್ಲಿ ಮಾತ್ರವಲ್ಲ, ಮುಗಿದ ಮೇಲೂ ತಮ್ಮ ಮನೆಗಳಲ್ಲಿ ನಿತ್ಯ ಯೋಗ, ಪ್ರಾಣಾಯಾಮ ಮೂಲಕ ದೈಹಿಕ, ಮಾನಸಿಕ ದೃಢತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಯೋಗ ಒಂದು ಜೀವನ ಪದ್ಧತಿ ಆಗಬೇಕು. ನಾವೆಲ್ಲರೂ ಒತ್ತಡದಲ್ಲೇ ಕೆಲಸ ಮಾಡುವವರು, ಆದರೆ ನಮ್ಮ ಆಂತರಿಕ ಒತ್ತಡ ನಿವಾರಿಸಲು ಯೋಗ ಪರಿಣಾಮಕಾರಿ. ಹೀಗಾಗಿ ಒತ್ತಾಯಕ್ಕಾಗಿ ಯೋಗ ತರಬೇತಿ ಮಾಡುತ್ತಿದ್ದೇವೆ ಎಂಬ ಭಾವನೆ ಯಾರಿಗೂ ಬೇಡ. ಕೇವಲ ಜಿಲ್ಲಾ ಕೇಂದ್ರದಲ್ಲಿ ಈ ತರಬೇತಿ ನೀಡುತ್ತಿಲ್ಲ, ಇತರ ಎರಡೂ ಉಪವಿಭಾಗಗಳಲ್ಲೂ ಈ ತರಬೇತಿ ಶಿಬಿರ ನಡೆಯಲಿದೆ. ಹೊಸಪೇಟೆಯಲ್ಲಿ ಪಾಲ್ಗೊಳ್ಳದವರಿಗಾಗಿ ಇನ್ನೊಂದು ತಂಡದಲ್ಲಿ ಯೋಗ ತರಬೇತಿ ನಡೆಯಲಿದೆ. ನಮ್ಮ ಕೋರಿಕೆ ಮನ್ನಿಸಿ, ಮೂರೂ ಉಪವಿಭಾಗಗಳಲ್ಲಿ ಯೋಗ ತರಬೇತಿ ನಡೆಸಲು ಸಮ್ಮತಿ ಸೂಚಿಸಿದ ಪತಂಜಲಿ ಯೋಗ ಸಮಿತಿಗೆ ಕೃತಜ್ಞರಾಗಿರುತ್ತೇವೆ ಎಂದರು.
ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಡಾ.ಪಿ.ಮಂಜುನಾಥ, ಜಿಲ್ಲಾ ಯೋಗ ಸಮಿತಿಯ ಪ್ರಮುಖರಾದ ಹಿರಿಯ ಯೋಗ ಸಾಧಕಿ ಉಮಾ ವಿಶ್ವನಾಥ, ಅನಂತ ಜೋಶಿ, ಉಮಾ ವಿಶ್ವನಾಥ, ನೂರ್‌ಜಾನ್, ಪೂಜಾ ಐಲಿ, ಕವಿತಾ ಭಾಸ್ಕರ್, ಗೀತಾ ಮಹಾರಾಜ್, ರಾಜಭಕ್ಷಿ, ಎಂ ಜಿ ಬಾಲಕೃಷ್ಣ, ರಾಮು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net