ಕಂಪ್ಲಿ: ಕೋಟೆ ಪ್ರದೇಶದಲ್ಲಿನ ಭೂದೇವಿ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗುರು ಶ್ರೀಶ ವಿಠ್ಠಲರ (ಕುಂಟೋಜಿದಾಸರು) 179ನೇ ಆರಾಧನೆ ನಿಮಿತ್ತ ಮಧ್ಯಾರಾಧನೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಗಂಗಾವತಿಯ ವಿಜಯಧ್ವಜ ವಿದ್ಯಾಪೀಠದ ಸಂಸ್ಕೃತ ಪ್ರಾಧ್ಯಾಪಕ ಪಂಡಿತ ವಾಗೀಶಾಚಾರ್ ಮಾತನಾಡಿ, ಶ್ರೀಶ ವಿಠ್ಠಲ ಹರಿದಾಸರ ‘ಸ್ತುತಿ ರತ್ನಮಾಲಾ’ ಹಾಗೂ ಇತರ ಕೃತಿಗಳು ಹರಿದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆಯಾಗಿವೆ ಎಂದರು.
ಕೊಪ್ಪಳದ ದಾಸ ಸಾಹಿತಿ ರೇಣುಕಾ ಅವರು ‘ಮೊರಬ್ಬ ಹರಿಕಥಾಮೃತ ಸಾರ’ ಕುರಿತು ಉಪನ್ಯಾಸ ನೀಡಿದರು. ಅಡಿವೇಶ ವಿಠ್ಠಲ ಅಂಕಿತದೊಂದಿಗೆ ಹರಿದಾಸ ಕೀರ್ತನಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಕುಷ್ಟಗಿಯ ಶ್ರೀ ಪ್ರಹ್ಲಾದಾಚಾರ ಅವರಿಗೆ ಸಾಹಿತ್ಯ ಸೇವೆಗಾಗಿ ಶ್ರೀಗುರು ಶ್ರೀಶ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆರಾಧನೆ ನಿಮಿತ್ತ ಸುಪ್ರಭಾತ, ಕುಂಟೋಜಿ ದಾಸರ ಕೀರ್ತನೆಗಳ ಸಾಮೂಹಿಕ ಪಾರಾಯಣ, ಹರಿಕಥಾಮೃತಸಾರ ಪಾರಾಯಣ, ಕುಂಟೋಜಿ ದಾಸರ ಭಾವಚಿತ್ರ ಗ್ರಾಮ ಪ್ರದಕ್ಷಿಣೆ ಕಾರ್ಯಕ್ರಮ ಜರುಗಿದವು.
ಭಕ್ತರಾದ ವಾದಿರಾಜಾಚಾರ್ ಖಜನಾದಾರ್, ದಿಗ್ಗಾವಿ ವೇಣುಗೋಪಾಲಾಚಾರ್, ಕೇಶವಾಚಾರ್ ಜೋಷಿ, ಶ್ರೀನಿವಾಸ ಪುರೋಹಿತ, ಡಾ.ಧೀರಣ್ಣ, ಶ್ರೀಗುರು ಶ್ರೀಶ ವಿಠ್ಠಲ ಆರಾಧನಾ ಸೇವಾ ಸಮಿತಿ, ಗುರುರಾಜ ಸೇವಾ ಮಂಡಳಿ, ಕೋಟೆಯ ಗುರು ಶ್ರೀಶ ವಿಠ್ಠಲ ಭಜನಾಮಂಡಳಿ ಭಕ್ತರು ಪಾಲ್ಗೊಂಡಿದ್ದರು.