ಮತ್ತೆ ಬಾನಂಗಳದಲ್ಲಿ ಹಾರಲಿದೆ ರಾಷ್ಟ್ರಧ್ವಜ?

ಹೊಸಪೇಟೆ ಜಿಲ್ಲಾಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜಸ್ತಂಭದ ದುರಸ್ತಿ ಕಾರ್ಯ ನಡೆಯುತ್ತಿರುವುದು.
ಹೊಸಪೇಟೆ ಜಿಲ್ಲಾಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜಸ್ತಂಭದ ದುರಸ್ತಿ ಕಾರ್ಯ ನಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆಯ 405 ಅಡಿ ಧ್ವಜಸ್ತಂಭಕ್ಕೆ ಐದು ಲಕ್ಷ ರೂ. ವೆಚ್ಚದಲ್ಲಿ ಕಾಯಕಲ್ಪ
ಹೊಸಪೇಟೆ: ದೇಶದ ಹೆಮ್ಮೆಯ ಪ್ರತೀಕವಾಗಿದ್ದ ಜಿಲ್ಲಾ ಕ್ರೀಡಾಂಗಣದ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಮತ್ತೆ ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಹಾರಾಡಲು ಸಜ್ಜಾಗಿದ್ದು, ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೃಹತ್ ಧ್ವಜಸ್ತಂಭದ ದುರಸ್ತಿ ಕಾರ್ಯ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಶನಿವಾರ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮಕ್ಕೆ ಗಗನದೆತ್ತರದಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ.
2025ರ ಧ್ವಜಾರೋಹಣದ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ರೋಪ್‌ವೇ ಹರಿದು ಧ್ವಜ ಕೆಳಗೆ ಬಿದ್ದ ದುರದೃಷ್ಟಕರ ಘಟನೆ ನಡೆದಿತ್ತು. ಅಂದಿನಿAದ ಭದ್ರತಾ ದೃಷ್ಟಿಯಿಂದ ಧ್ವಜಾರೋಹಣ ಸ್ಥಗಿತಗೊಂಡಿತ್ತು. ಆದರೆ, ಈ ಬಾರಿಯ ಸ್ವಾತಂತ್ರ‍್ಯೋತ್ಸವದ ವೇಳೆಗೆ ಧ್ವಜ ಹಾರಿಸಲೇಬೇಕೆಂದು ಪಣತೊಟ್ಟ ನಗರಸಭೆ ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ.
ಧ್ವಜಸ್ತAಭದ ಸಮಗ್ರ ದುರಸ್ತಿ ಜವಾಬ್ದಾರಿಯನ್ನು ಹೈದರಾಬಾದ್ ಮೂಲದ ಲಾರ್ಸ್ ಅಂಡ್ ಫೋರ್ಸ್ ಕಂಪನಿಗೆ ವಹಿಸಲಾಗಿದೆ. ದುರಸ್ತಿಗಾಗಿ ಪ್ರಾಥಮಿಕವಾಗಿ 5 ಲಕ್ಷ ರೂ.ವೆಚ್ಚ ನಿಗದಿಪಡಿಸಲಾಗಿದ್ದು, ಒಳಭಾಗದ ತಾಂತ್ರಿಕ ಪರಿಶೀಲನೆ ನಂತರ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ಎರಡು ದಿನಗಳಿಂದ 405 ಅಡಿ ಎತ್ತರದಲ್ಲಿ ಬೀಸುತ್ತಿರುವ ಭಾರಿ ಗಾಳಿಯ ನಡುವೆಯೂ ತಂತ್ರಜ್ಞರು ಹರಸಾಹಸ ಪಟ್ಟು ನವೀಕರಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ಭವಿಷ್ಯದಲ್ಲಿ ಯಾವುದೇ ಅವಘಡ ಸಂಭವಿಸದAತೆ ಅತ್ಯಾಧುನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಳೆಯ ರೋಪ್‌ವೇ ಬದಲಿಗೆ ಭಾರಿ ತೂಕ ಮತ್ತು ಗಾಳಿಯ ವೇಗವನ್ನು ತಡೆದುಕೊಳ್ಳುವ ಸುಧಾರಿತ ಗುಣಮಟ್ಟದ ಹೊಸ ಸ್ಟೀಲ್ ರೋಪ್‌ವೇ ಅಳವಡಿಕೆ ಮಾಡಲಾಗುತ್ತದೆ. ಧ್ವಜವನ್ನು ಸುಲಭವಾಗಿ ಏರಿಸಲು ಮತ್ತು ಇಳಿಸಲು ಹೊಸ ಮೋಟಾರ್ ಹಾಗೂ ಪುಲ್ಲಿ ಸೆಟಪ್, ಹೈ-ವೋಲ್ಟೇಜ್ ಫ್ಲಡ್‌ಲೈಟ್ಸ್ ಮತ್ತು ವಿಮಾನ ಸಂಚಾರ ಸುರಕ್ಷತೆಯ ಏವಿಯೇಷನ್ ಲೈಟ್‌ಗಳ ಸಂಪೂರ್ಣ ಓವರ್‌ಹಾಲಿಂಗ್ ಅಳವಡಿಸಲಾಗುತ್ತದೆ.
ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಮತ್ತೆ ರಾಷ್ಟ್ರಧ್ವಜ ಗರ್ವದಿಂದ ಹಾರಾಡಲಿದ್ದು, ವಿಜಯನಗರ ಜಿಲ್ಲೆಯ ಜನರಲ್ಲಿ ದೇಶಪ್ರೇಮದ ರೋಮಾಂಚನ ಮನೆಮಾಡಿದೆ.
"

ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ 405 ಅಡಿ ಧ್ವಜಸ್ತಂಭದ ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದೆ. ಸ್ವಾತಂತ್ರ‍್ಯ ದಿನಾಚರಣೆಯಂದು ಯಾವುದೇ ಲೋಪವಿಲ್ಲದೆ ಗಗನದೆತ್ತರಕ್ಕೆ ತ್ರಿವರ್ಣ ಧ್ವಜ ಹಾರಿಸಲು ನಗರಸಭೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

— ಶಿವಕುಮಾರ್ ಎರಗುಡಿ, ನಗರಸಭೆ ಪೌರಾಯುಕ್ತ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net