

ಪ್ರಮುಖ ಮುಖ್ಯಾಂಶಗಳು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಈಗ ಕಾಡುಪ್ರಾಣಿಗಳ ದಾಳಿ ಮಿತಿಮೀರಿದೆ. ಇತಿಹಾಸದ ಭವ್ಯತೆಗೆ ಸಾಕ್ಷಿಯಾಗಿದ್ದ ವಿಜಯನಗರದ ಈ ಪವಿತ್ರ ಭೂಮಿ, ಈಗ ಚಿರತೆ ಮತ್ತು ಕರಡಿಗಳ ಆವಾಸಸ್ಥಾನವಾಗಿ ಬದಲಾಗುತ್ತಿದೆಯೇ ಎಂಬ ಭೀತಿ ಮೂಡಿಸಿದೆ. ಹಗಲು-ರಾತ್ರಿ ಎನ್ನದೆ ರಾಜರೋಷವಾಗಿ ತಿರುಗಾಡುತ್ತಿರುವ ವನ್ಯಮೃಗಗಳಿಂದಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ದಿನನಿತ್ಯ ಅಂಗೈಯಲ್ಲಿ ಜೀವ ಹಿಡಿದು ಬದುಕುವಂತಾಗಿದೆ.
ಹAಪಿಯ ಮಾಲ್ಯವಂತ, ಗುಡ್ಡದ ತಿಮ್ಮಪ್ಪ, ಕುಸ್ತಿ ಅಖಾಡದ ಬಳಿಯ ಗುಡ್ಡ, ಅಕ್ಕ-ತಂಗಿಯರ ಗುಡ್ಡ, ರಾಮಲಕ್ಷ್ಮಣ ಗುಡ್ಡಿ ಸೇರಿ ನಾನಾ ಕಡೆ ಚಿರತೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಎಂಟು ಚಿರತೆಗಳು ಓಡಾಡುತ್ತಿವೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಹಂಪಿಯಲ್ಲಿ ಮೇಲಿಂದ ಮೇಲೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಪ್ರವಾಸೋದ್ಯಮದ ಮೇಲೆ ಕಾರ್ಮೋಡ ಕವಿಯುವ ದುಗುಡ ಮೂಡಿದೆ.
ವಿಜಯನಗರದ ವೈಭವ ಸಾರುವ ಹಂಪಿ ಉತ್ಸವದ ವೇಳೆಯಲ್ಲೇ ಹಂಪಿಯ ಐತಿಹಾಸಿಕ ವಿರೂಪಾಕ್ಷೇಶ್ವರ ದೇಗುಲದ ಬಳಿ ಚಿರತೆಯೊಂದು ರಾಜರೋಷವಾಗಿ ಓಡಾಡಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿತು. ಕೇವಲ ಕತ್ತಲಾಗುತ್ತಿದ್ದಂತೆ ಅಷ್ಟೇ ಅಲ್ಲ, ಹಾಡುಹಗಲೇ ಪ್ರಮುಖ ಸ್ಮಾರಕಗಳ ಬಳಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಈಗ ಸಾಮಾನ್ಯ ಎಂಬAತಾಗಿದೆ.
ಬುಕ್ಕಸಾಗರ ಹಾಗೂ ವೆಂಕಟಪುರ ಬಳಿ ಕಳೆದ ಏಪ್ರಿಲ್ ಒಂದೇ ವಾರದಲ್ಲಿ ಇಬ್ಬರು ರೈತರ ಮೇಲೆ ಕರಡಿ ದಾಳಿ ನಡೆಸಿ ಗಂಬಿರ ಗಾಯಗೊಳಿಸಿತು. ಇನ್ನು ಇತ್ತೀಚೆಗೆ ಕಡ್ಡಿರಾಂಪುರ ಬಳಿ ಯುವಕರ ಮೇಲೆ ಚಿರತೆ ದಾಳಿ ನಡೆಸಿ ಕಾಲಿಗೆ ಗಾಯಗೊಳಿಸಿತು. ಇದರಿಂದ ಸ್ಥಳೀಯರು ಮಾತ್ರವಲ್ಲದೇ ಪ್ರವಾಸಿಗು ಕೂಡ ಆತಂಕಗಿಡಾಗಿದ್ದಾರೆ.
ಹಂಪಿ ಸುತ್ತಮುತ್ತಲಿನ ಭಾಗದಲ್ಲಿ ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳು ಚಿರತೆಯ ದಾಳಿಗೆ ತುತ್ತಾಗುತ್ತಿದ್ದು, ಅವುಗಳ ಉಳಿವೇ ಕಷ್ಟವಾಗಿದೆ. ಒಂದೇ ವಾರದಲ್ಲಿ ಕಡ್ಡಿರಾಂಪುರ ಹಾಗೂ ಬುಕ್ಕಸಾಗರ ಸೇರಿದಂತೆ ಹಂಪಿ ಪರಿಸರದಲ್ಲಿ10ಕ್ಕೆ ಹೆಚ್ಚು ನಾಯಿಗಳು ಚಿರತೆಗೆ ಬಲಿಯಾಗಿದ್ದಾವೆ. ಹಾಡುಹಗಲೇ ರಸ್ತೆಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುವುದು ಈಗ ಇಲ್ಲಿ ಸರ್ವೇಸಾಮಾನ್ಯವಾಗಿದೆ.
ಚಿರತೆಗಳ ಈ ಮುಕ್ತ ಸಂಚಾರದಿAದಾಗಿ ದೇಶ-ವಿದೇಶಿ ಪ್ರವಾಸಿಗರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹಂಪಿಯ ಸೌಂದರ್ಯ ಸವಿಯಲು ಬಂದವರು ಭಯದಿಂದಲೇ ತಿರುಗಾಡುವಂತಾಗಿದೆ. ಇನ್ನು ಕೆಲವು ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬAತೆ ಅರ್ಧಕ್ಕೇ ತಮ್ಮ ಪ್ರವಾಸ ಮೊಟಕುಗೊಳಿಸಿ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇದು ಸ್ಥಳೀಯ ಪ್ರವಾಸೋದ್ಯಮದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ.
ಇತ್ತ ಚಿರತೆ ಕಾಟವಾದರೆ, ಅತ್ತ ಕರಡಿಗಳ ಉಪಟಳವೂ ಕಡಿಮೆಯಾಗಿಲ್ಲ. ಬುಕ್ಕಸಾಗರ ಹಾಗೂ ವೆಂಕಟಾಪುರ ಭಾಗದಲ್ಲಿ ಜಮೀನುಗಳಿಗೆ ತೆರಳಿದ್ದ ರೈತರ ಮೇಲೆ ಕರಡಿಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಕೃಷಿ ಕೂಲಿಕಾರ್ಮಿಕರು ಮತ್ತು ರೈತರು ಪ್ರತಿದಿನ ಹೊಲಗಳಿಗೆ ಹೋಗಬೇಕಾದರೆ ಪ್ರಾಣಭಯದಲ್ಲೇ ಹೆಜ್ಜೆ ಇಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ ಮಾನವ ಮತ್ತು ಚಿರತೆ ನಡುವೆ ನೇರ ಸಂಘರ್ಷ ನಡೆದಿರಲಿಲ್ಲ ಎಂಬ ಸಮಾಧಾನವಿತ್ತು. ಆದರೆ ಈಗ ಪರಿಸ್ಥಿತಿ ಕೈಮೀರುತ್ತಿದೆ, ನಿರಂತರ ದಾಳಿಗಳಿಂದ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಇಷ್ಟೆಲ್ಲಾ ಅವಾಂತರಗಳು ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ಚಿರತೆ ಹಾಗೂ ಕರಡಿಗಳನ್ನು ಸೆರೆಹಿಡಿಯಲು ಇಲಾಖೆ ಯಾವುದೇ ಗಂಭೀರ ಕಾಳಜಿ ವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಂಪಿ ಪರಿಸರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಸಂಚರಿಸುತ್ತಿರುವ ಚಿರತೆಗಳನ್ನು ತಕ್ಷಣ ಸೆರೆಹಿಡಿಯಬೇಕು. ಕಾಡುಪ್ರಾಣಿಗಳನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿ ಸಾರ್ವಜನಿಕರ ಜೀವ ರಕ್ಷಿಸಬೇಕು. ಪ್ರವಾಸಿ ತಾಣಗಳಲ್ಲಿ ಹಾಗೂ ಕೃಷಿ ಭೂಮಿಯ ಬಳಿ ಅರಣ್ಯ ಸಿಬ್ಬಂದಿಯ ಕಾವಲು ಹೆಚ್ಚಿಸಬೇಕು. ಯಾವುದೇ ದೊಡ್ಡ ಮಟ್ಟದ ಪ್ರಾಣಹಾನಿ ಅಥವಾ ಸಂಭಾವ್ಯ ಅಪಾಯ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಹಂಪಿ ಕೇವಲ ಪ್ರವಾಸಿ ತಾಣವಾಗಿ ಉಳಿಯದೆ, ಭಯದ ತಾಣವಾಗಿ ಬದಲಾಗುವುದರಲ್ಲಿ ಅನುಮಾನವಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.