ಎರಡು ದಿನದ ಕೂಲಿ ಹಣ ನೀಡುವವರಾರು ?

ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಕಲ್ಲು ಗ್ರಾಪಂ ಕಚೇರಿ ಮುಂದೆ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಕಲ್ಲು ಗ್ರಾಪಂ ಕಚೇರಿ ಮುಂದೆ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Published on
ಹಗರಿಬೊಮ್ಮನಹಳ್ಳಿ: ಕೆಲಸದ ಸ್ಥಳದಲ್ಲಿ ಎನ್‌ಎಂಎಂಎಸ್ ತಾಂತ್ರಿಕ ದೋಷದಿಂದ ಹಾಜರಾತಿಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಬೆಣ್ಣಿಕಲ್ಲು ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರು ಗ್ರಾಪಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ತಾಲೂಕು ಸಂಚಾಲಕಿ ಅಕ್ಕಮ್ಮ ಮಾತನಾಡಿ, 350ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಮಂಗಳವಾರ ಹಾಗೂ ಬುಧವಾರ ಕೆಲಸ ಮಾಡಿದ್ದು, ಎನ್‌ಎಂಎಂಎಸ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇದರಿಂದಾಗಿ ಎರಡು ದಿನ ಮಾಡಿರುವ ಕೆಲಸಕ್ಕೆ ಕೂಲಿ ಹಣ ಯಾರು ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನಾ ಗ್ರಾಪಂಗಳಲ್ಲಿ ಇದೇ ರೀತಿ ಸಮಸ್ಯೆಯಾಗಿದೆ. ತಾಪಂ ಇಒ ಅವರನ್ನು ಕೇಳಿದರೆ ಎನ್‌ಎಂಎಂಎಸ್ ಸರಿ ಆಗುವವರೆಗೂ ಕಾಯಬೇಕಿತ್ತು ಎಂದು ನಿರ್ಲಕ್ಷ್ಯದ ಮಾತುಗಳನ್ನು ಹೇಳುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖರಾದ ಶಾರದಮ್ಮ, ಹನುಮಂತಪ್ಪ, ಸೋಮಶೇಖರ, ಕುಮಾರ್, ರಂಜಿತಾ, ನಾಗರತ್ನ, ಪಾರಮ್ಮ, ಅಂಜಿನೆಮ್ಮ, ನೀಲಮ್ಮ, ಕೊಟ್ರಮ್ಮ, ಪಕ್ಕೀರಮ್ಮ, ಕೆ.ಲಕ್ಷ್ಮೀ, ನಾಗರಾಜ ಮತ್ತಿತರರು ಇದ್ದರು.
ಈ ಬಗ್ಗೆ ತಾಪಂ ಇಒ ಪಿ.ವಿಶ್ವನಾಥ ಪ್ರತಿಕ್ರಿಯಿಸಿ, ರಾಜ್ಯದೆಲ್ಲೆಡೆ ತಾಂತ್ರಿಕ ದೋಷ ಕಂಡುಬಂದಿದ್ದು, ಇಂತಹ ಸಮಸ್ಯೆಗಳು ನಿತ್ಯ ಇರುವುದಿಲ್ಲ. ಆಕಸ್ಮಿಕವಾಗಿ ಆದಾಗ ಕೆಲಸಗಾರರು ಸಹಕರಿಬೇಕು. ಕೆಲಸ ಮಾಡುವ ಸ್ಥಳಕ್ಕೆ ನಮ್ಮ ಸಿಬ್ಬಂದಿ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net