ಕರ್ತವ್ಯ ಲೋಪ ವಾರ್ಡನ್ ಅಮಾನತು

ಮಂಜುಳಾ ತಂಬ್ರಹಳ್ಳಿ
ಮಂಜುಳಾ ತಂಬ್ರಹಳ್ಳಿ
Published on

ಹೊಸಪೇಟೆ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹೂವಿನಹಡಗಲಿ ಸರ್ಕಾರಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಮಂಜುಳಾ ತಂಬ್ರಹಳ್ಳಿ ಅವರನ್ನು ಸೇವೆಯಿಂದ ಜಿಪಂ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ನಿಲಯ ಪಾಲಕಿ ಮಂಜುಳ ತಂಬ್ರಹಳ್ಳಿ ವಿದ್ಯಾರ್ಥಿ ನಿಲಯದಿಂದ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಹೂವಿನಹಡಗಲಿ ತಾಪಂ ಆಡಳಿತಾಧಿಕಾರಿಗಳು ಹಾಗೂ ಜಿಪಂ ಉಪಕಾರ್ಯದರ್ಶಿ ಜಂಟಿಯಾಗಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಕ್ರಮವಾಗಿ ಸಾಗಿಸಲಾಗಿದ್ದ ಅಕ್ಕಿ ದಾಸ್ತಾನನ್ನು ಪುನಃ ವಸತಿ ನಿಲಯಕ್ಕೆ ತಂದಿಟ್ಟಿರುವುದು ಕಂಡುಬಂದಿದೆ. ನಿಲಯಕ್ಕೆ ನೀಡಲಾಗಿದ್ದ ವಾಷಿಂಗ್ ಮೆಷಿನ್ ಅನ್ನು ನಿಯಮಾನುಸಾರ ವಿಲೇವಾರಿ ಮಾಡದೆ ಗುಜರಿಗೆ ಮಾರಾಟ ಮಾಡಲಾಗಿದೆ. ನಿಲಯದಲ್ಲಿದ್ದ ಗ್ಯಾಸ್ ಸಿಲಿಂಡರ್ ಸಹ ಕಳ್ಳತನವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಎಲ್ಲಾ ಅರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 1966 ನಿಯಮ-3ನ್ನು ಉಲ್ಲಂಘಿಸಿದ ಆರೋಪದ ಮೇಲೆ ವಾರ್ಡನ್ ಮಂಜುಳ ಅವರನ್ನು ಅಮಾನತುಗೊಳಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಓ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net