ಪುರಸಭೆ ನಿಯಮಾವಳಿಗಳ ಉಲ್ಲಂಘನೆ ಸಲ್ಲ

ಹಗರಿಬೊಮ್ಮನಹಳ್ಳಿ ಪುರಸಭೆ ಸಾಮಾನ್ಯ ಸಭೆ ಕರೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸದಸ್ಯರು ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ ಪುರಸಭೆ ಸಾಮಾನ್ಯ ಸಭೆ ಕರೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸದಸ್ಯರು ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಿದರು.
Published on
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಪುರಸಭೆ ಸದಸ್ಯರ ಗಮನಕ್ಕಿಲ್ಲದೆ ಕಾಮಗಾರಿ ಕೈಗೊಳ್ಳುವ ಮೂಲಕ ಸದಸ್ಯರ ಹಕ್ಕುಗಳಿಗೆ ಧಕ್ಕೆ ತರಲಾಗಿದೆ. ಸಾಮಾನ್ಯ ಸಭೆಗಳನ್ನು ನಡೆಸದಿರುವುದರಿಂದ ಪುರಸಭೆಯಿಂದ ಜನಸಾಮಾನ್ಯರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಪುರಸಭೆ ಸದಸ್ಯ ಎಲ್.ಗಣೇಶ ಆರೋಪಿಸಿದರು.

ಪುರಸಭೆ ಸಾಮಾನ್ಯ ಸಭೆ ಆಯೋಜಿಸಬೇಕು ಹಾಗೂ ಕೈಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಪಾವತಿಸದಂತೆ ಆಗ್ರಹಿಸಿ ಪುರಸಭೆಯ 15ಕ್ಕೂ ಹೆಚ್ಚು ಸದಸ್ಯರು ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು. ಪುರಸಭೆ ಅಧ್ಯಕ್ಷರಾದ ಮರಿ ರಾಮಣ್ಣ ಪುರಸಭೆ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಧಿಕಾರಿಗಳು ಸಹ ಇದಕ್ಕೆ ಹೊರತಾಗಿಲ್ಲ ಎಂದು ದೂರಿದರು.

ಸದಸ್ಯ ದೀಪಕ್ ಸಾ ಕಠಾರಿ ಮಾತನಾಡಿ, ಪುರಸಭೆ ಬಿಲ್‌ಗಳನ್ನು ಸದಸ್ಯರೊಂದಿಗೆ ಚರ್ಚಿಸದೆ ಪಾವತಿಸಿ ಪೌರಾಡಳಿತ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಉಸಿರು ಕಟ್ಟಿದ ವಾತಾವರಣದಲ್ಲಿ ಸದಸ್ಯರು ದಿನಗಳನ್ನು ನೂಕುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸದಸ್ಯ ಜೋಗಿ ಹನುಮಂತಪ್ಪ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್‌ಗಳು ಸೌಲಭ್ಯಗಳಿಂದ ವಂಚಿತವಾಗಿದ್ದು, ಅಧ್ಯಕ್ಷರು ಸಾಮಾನ್ಯ ಸಭೆ ಕರೆದಿದ್ದರೆ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸಬಹುದಿತ್ತು ಎಂದರು.

ಸಾಮಾನ್ಯ ಸಭೆ ಕರೆಯಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಸದಸ್ಯರ ಅಭಿಪ್ರಾಯ ಪಡೆಯಬೇಕು. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂದು ಸದಸ್ಯರಾದ ಬಿ.ಗಂಗಾಧರ, ನವೀನ್ ಕುಮಾರ್, ಡಿ.ಎಂ.ಅಜೀಜುಲ್ಲಾ, ನಾಗರಾಜ್ ಜನ್ನು, ಬಣಕಾರ ಸುರೇಶ, ರಾಜೇಶ ಬ್ಯಾಡ್ಗಿ, ಮತ್ತು ತೆಲಗಿ ಇಸ್ಮಾಯಿಲ್ ಆಗ್ರಹಿಸಿದರು.
ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಿದರು. ಸದಸ್ಯೆಯರಾದ ಎಚ್.ಎಂ.ಚನ್ನಮ್ಮ, ಅಂಬಳಿ ಮಂಗಳಾ, ಖಾಜಾಬನ್ನಿ, ಎಸ್.ಕಮಲಾ ಶಿವಮೊಗ್ಗ, ಕೆ.ರೇಷ್ಮಾ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net