ಕೂಡ್ಲಿಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಪದಾಧಿಕಾರಿಗಳು ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯಉಪಾಧ್ಯಕ್ಷ ಎಚ್.ವೀರಣ್ಣ ಮಾತನಾಡಿ, ತಾಲೂಕಿನ ಜರಿಮಲೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರ ಬಯೋಮೆಟ್ರಿಕ್ ಪಡೆದು ಮೂರು ತಿಂಗಳಾದರೂ ಕೆಲ ಗ್ರಾಮಗಳ ಪಡಿತರ ಚೀಟಿದಾರರಿಗೆ ಅಕ್ಕಿ ನೀಡದೆ ಅವ್ಯವಹಾರ ಎಸಗಲಾಗಿದೆ. ಹರವದಿ, ಕಾಮಯ್ಯನಹಟ್ಟಿ, ಗೆದ್ದಲಗಟ್ಟೆ ಗ್ರಾಮದ ಫಲಾನುಭವಿಗಳಿಗೆ ಎರಡು ತಿಂಗಳು ಮತ್ತು ಜರಿಮಲೆ, ದಿಬ್ಬದಹಳ್ಳಿ ಗ್ರಾಮಸ್ಥರಿಗೆ ಒಂದು ತಿಂಗಳು ಪಡಿತರ ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಏ.೨೮ ರಂದು ಮನವಿ ನೀಡಿದರೂ ಕ್ರಮ ವಹಿಸಿಲ್ಲ ಎಂದು ಆಕ್ರೋ ವ್ಯಕ್ತಪಡಿಸಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಆರು ತಿಂಗಳು ಕಳೆದರೂ ಕೆರೆಗಳಿಗೆ ನೀರು ಹರಿಸಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆರು ತಿಂಗಳಿನಿಂದ ಬೀದಿ ದೀಪಗಳಿಲ್ಲದೆ ಜನರು ಕತ್ತಲಲ್ಲಿ ತಿರುಗಾಡುವ ಪರಿಸ್ಥಿತಿ ಇದೆ. ತಾಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಸಂಪೂರ್ಣ ಕಳಪೆಯಾಗಿವೆ ಎಂದು ದೂರಿದರು.
ಪಿಎಂಸಿಯಲ್ಲಿರುವ ರಾಗಿ, ಜೋಳ ಖರೀದಿ ಕೇಂದ್ರದಲ್ಲಿ ವ್ಯಾಪಾರಸ್ಥರು ಅವ್ಯವಹಾರ ಮಾಡಿ ರೈತರನ್ನು ವಂಚನೆ ಮಾಡುತ್ತಿದ್ದಾರೆ. ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕಾಮಗಾರಿ ನೆಪದಲ್ಲಿ ಗ್ರಾಮಗಳಲ್ಲಿನ ಬೀದಿಗಳ ಸಿಸಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ.
ನಳಗಳಲ್ಲಿ ಹನಿ ನೀರು ಬಂದಿಲ್ಲ. ಬಿತ್ತನೆ ಬೀಜ, ರಸಗೊಬ್ಬರ ನೀಡಲು ಎಫ್‌ಐಡಿ ಕಡ್ಡಾಯ ಮಾಡಿರುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.